ಬೆಂಗಳೂರು: ನಾಲ್ಕನೇ ದಿನದ ಕಲಾಪದಲ್ಲೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿಬಿಸಿ ಚರ್ಚೆ ಮುಂದುವರಿಯಿತು. ಮಾಜಿ ಸಿಎಂ ಕುಮಾರಸ್ವಾಮಿ ಬಹಳ ದಿನಗಳ ಬಳಿಕ ಕಲಾಪದಲ್ಲಿ ಹಾಜರಾಗಿದ್ದರು.
ಇಂದಿನ ಬಹುತೇಕ ಕಲಾಪ ಸಿಎಂ ಬೊಮ್ಮಾಯಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ಅನುಪಸ್ಥಿತಿಯಲ್ಲೇ ನಡೆಯಿತು. ಆಸ್ಕರ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಸದಸ್ಯರು ಸಂಜೆ ವೇಳೆಗೆ ವಿಧೇಯಕ ಚರ್ಚೆ ಹಿನ್ನೆಲೆಯಲ್ಲಿ ಕಲಾಪದಲ್ಲಿ ಪಾಲ್ಗೊಂಡರು. ಈ ವೇಳೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕವನ್ನು ಗದ್ದಲದ ಮಧ್ಯೆಯೇ ಚರ್ಚೆಗೆ ತೆಗೆದುಕೊಳ್ಳಲಾಯಿತು.
ಸಿದ್ದರಾಮಯ್ಯಗೆ ಗುರಿಯಿಟ್ಟ ಹೆಚ್ಡಿಕೆ:
ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಸಂಬಂಧ ಮಾತನಾಡಿದ ಹೆಚ್ಡಿಕೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿದ್ದರು. ಕೆಲವು ಸಂದರ್ಭಗಳಲ್ಲಿ ಬೆಲೆ ಏರಿಕೆ ಅನಿವಾರ್ಯವಾಗುತ್ತದೆ. ಇದನ್ನು ಆದರೆ ಜನಸಾಮಾನ್ಯರು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವು ಯೋಜನೆಗಳನ್ನು ಮುಂದೂಡಿ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಹಿಂದೆ ಮೈತ್ರಿ ಸರ್ಕಾರದಲ್ಲೂ ಐದು ಕೆಜಿ ಅಕ್ಕಿಗೆ ಹಣ ಇಟ್ಟು ಏಳು ಕೆಜಿ ಮಾಡಿ ಅಂತ ಸಿದ್ದರಾಮಯ್ಯ ಒತ್ತಾಯ ಮಾಡಿದ್ರು. ಸಾಲಮನ್ನಾ ಮಾಡಿ ಅಂತ ಹಿಂದೆ ಬಿದ್ದಿದ್ರು. ಆಗ ನಾನು ಸಮಸ್ಯೆಗೆ ಸಿಲುಕಿದ್ದೆ ಎಂದರು.
ಯಡಿಯೂರಪ್ಪನವರ ಜೊತೆಗೂ ನಾನು ಸರ್ಕಾರ ಮಾಡಿದ್ದೇನೆ. ಅವರಿಗೂ ಬಡವರ ಪರ ಕಾಳಜಿಯಿದೆ. ನೀವು ಬೊಮ್ಮಾಯಿಯವರಿಗೆ ಹೇಳಿ 55 ಲಕ್ಷ ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಕೊಡಿಸಿ ಎಂದು ಮೂಲೆಯಲ್ಲಿ ಕುಳಿತಿದ್ದ ಬಿಎಸ್ವೈಗೆ ಎಚ್ಚರಿಸಿದರು.
ಡಿಸಿ ರೋಹಿಣಿ ವಿರುದ್ಧ ಸಾ.ರಾ.ಮಹೇಶ್ ಆಕ್ರೋಶ:
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಸಾ.ರಾ.ಮಹೇಶ್ ನಡುವಿನ ಗುದ್ದಾಟ ಇಂದು ಕಲಾಪದಲ್ಲಿ ಅನಾವರಣವಾಯ್ತು. ತೈಲ ಬೆಲೆ ಏರಿಕೆ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಜಿಲ್ಲಾಧಿಕಾರಿಗಳು ಪಿಡಿ ಖಾತೆಯಲ್ಲಿನ ಹಣವನ್ನು ಸರಿಯಾಗಿ ಬಳಕೆ ಮಾಡ್ತಿಲ್ಲವೆಂದು ಆರೋಪಿಸ್ತಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ್ರು. ಬ್ಯಾಗ್ ಖರೀದಿಯಲ್ಲಿ 6.5 ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಹೆಸರು ಹೇಳದೆ ವಾಗ್ದಾಳಿ ನಡೆಸಿದ್ರು.
ಇದಕ್ಕೆ ಪೂರಕವಾಗಿ ಕುಮಾರಸ್ವಾಮಿ ಕೂಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು. ಅಧಿಕಾರಿಗಳು ಪದೇ ಪದೇ ಮಾಧ್ಯಮಗಳ ಮುಂದೆ ಹೇಳಿಕೆ ಕೊಡ್ತಾರೆ. ಕಾನೂನಿನಲ್ಲಿಇದಕ್ಕೆ ಅವಕಾಶ ಇಡೆಯಾ? ಅವರಿಗೆ ಅಧಿಕಾರ ಕೊಟ್ಟಿದ್ದು ಯಾರು ಅಂತ ಪ್ರಶ್ನಿಸಿದ್ರು. ಇದರ ಬಗ್ಗೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ್ ಕೆಲವು ಅಧಿಕಾರಿಗಳು ಓವರ್ ಆ್ಯಕ್ಟಿಂಗ್ ಮಾಡ್ತಾರೆ. ಇದು ನಮ್ಮ ಗಮನಕ್ಕೂ ಬಂದಿದೆ. ಸಿಎಸ್ ಜೊತೆ ಮಾತನಾಡಿ ಕ್ರಮ ತೆಗೆದುಕೊಳ್ತೇವೆಂದು ತಿಳಿಸಿದ್ರು.
ಎರಡು ವಿಧೇಯಕಗಳು ಪಾಸ್:
ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಾಂತರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ ಹಾಗೂ 2021ನೇ ಸಾಲಿನ ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ತಿದ್ದುಪಡಿ ವಿಧೇಯಕಗಳು ಅಂಗೀಕೃತಗೊಂಡವು. ಈ ವಿಧೇಯದಂತೆ ಬೆಂಗಳೂರಿನಲ್ಲಿ 30x40 ಸೈಟಿನಲ್ಲಿ ಮನೆ ಕಟ್ಟೋರಿಗೆ ಇನ್ಮುಂದೆ ಹೊಸ ಷರತ್ತು ಹಾಗೂ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಲಾಗಿದೆ. ಇದಕ್ಕಿಂತ ಚದರಡಿ ಮೇಲ್ಪಟ್ಟ ನಿವೇಶನದಲ್ಲಿರುವ ಕಟ್ಟಡಗಳಿಗೂ ಮಳೆ ನೀರು ಕೊಯ್ಲು ಕಡ್ಡಾಯ ಮಾಡಲಾಗಿದೆ.
ಕ್ಷೇತ್ರ ಪುನರ್ವಿಂಗಡನೆ ಬಿಲ್ ಗದ್ದಲ, ಕಾಂಗ್ರೆಸ್ ವಿರೋಧ:
ಸಂಜೆ ವೇಳೆ ತಾಪಂ, ಜಿಪಂ ಕ್ಷೇತ್ರ ಪುನರ್ ವಿಂಗಡನೆ ಗೊಳಿಸುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ಕಲಾಪದಲ್ಲಿ ಗದ್ದಲ ಮೂಡಿಸಿತು. ನಾಳೆ ವಿಧೇಯಕ ಮಂಡಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿದರು. ಆದರೆ ಗದ್ದಲದ ಮಧ್ಯೆಯೇ ವಿಧೇಯಕವನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು.
'ಕರಾಳ ವಿಧೇಯಕ'
ಈ ವಿಧೇಯಕಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಇದರ ಹಿಂದೆ ಸರ್ಕಾರದ ಸದುದ್ದೇಶ ಕಾಣುತ್ತಿಲ್ಲ, ದುರುದ್ದೇಶ ಇದೆ ಎಂದು ಆರೋಪಿಸಿದರು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ಚುನಾವಣೆ ಮುಂದೂಡುವ ಉದ್ದೇಶದಿಂದ ತರಲಾಗಿದೆ. ಬಿಜೆಪಿ ಮೀಸಲಾತಿ ವಿರುದ್ಧವಾಗಿದೆ. ಇದೊಂದು ಸಂವಿಧಾನ ವಿರೋಧಿ ಹಾಗೂ ಕರಾಳ ವಿಧೇಯಕ ಎಂದು ಆರೋಪಿಸಿದರು.
'ಬೋಗಸ್ ತಿದ್ದುಪಡಿ'
ತಿದ್ದುಪಡಿ ವಿಧೇಯಕ ಸಂಬಂಧ ಚರ್ಚೆ ನಡೆಸಿದ ಶಾಸಕ ಕೃಷ್ಣ ಬೈರೇಗೌಡ, ಈ ತಿದ್ದುಪಡಿ ಸಂವಿಧಾನ ವಿರೋಧಿ ತಿದ್ದುಪಡಿಯಾಗಿದೆ. ಅಧಿಕಾರ ವಿಕೇಂದ್ರೀಕರಣದಲ್ಲಿ ಕರ್ನಾಟಕ ಮೇಲುಪಂಕ್ತಿ ಹಾಕಿದ್ದೇವೆ. ಈಗಿರುವ ಕ್ಷೇತ್ರ ಮರು ವಿಂಗಡನೆ ನ್ಯೂನತೆಯಿಂದ ಕೂಡಿದ್ದು, ಅದಕ್ಕಾಗಿ ಈ ವಿಧೇಯಕ ತರುತ್ತಿದ್ದೀರಿ. ಆದರೆ ಕ್ಷೇತ್ರ ಮರುವಿಂಗಡನೆ ಮಾಡಿದ್ದಲ್ಲ. ಚು.ಆಯೋಗ ಮಾಡಿದ್ದಲ್ಲ. ಸರ್ಕಾರ ಅದಕ್ಕೆ ನಿಯಮಾವಳಿ ರೂಪಿಸಿದೆ. ಅದಕ್ಕೆ ಸಂಪುಟ ಸಭೆಯ ಅನುಮೋದಿತ ನಿಯಮದ ಪ್ರಕಾರ ಕ್ಷೇತ್ರ ಮರುವಿಂಗಡನೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ತಿದ್ದುಪಡಿ ಮಾಡುವುದಾದರೆ 2016ರ ಗ್ರಾಮ ಸ್ವರಾಜ್ ಕಾಯ್ದೆಯ ಕಾನೂನು ತಿದ್ದುಪಡಿ ಮಾಡಿ. ಅಲ್ಲಿಂದ ಸಮಸ್ಯೆ ಆಗುತ್ತಿದೆ. ಅದನ್ನು ಸರಿಪಡಿಸುವ ಬದಲು ಡಿಲಿಮಿಟೇಷನ್ ಆಯೋಗ ಮಾಡುತ್ತಿದ್ದೀರಾ. ಅವರೂ 2016ರ ಕಾನೂನಿನಡಿಯೇ ಕೆಲಸ ಮಾಡಬೇಕು. ಹೀಗಾಗಿ ನಿಮ್ಮ ಉದ್ದೇಶ ಈಡೇರಲ್ಲ. ಇದರ ಉದ್ದೇಶ ತಾಪಂ, ಜಿಪಂ ಮುಂದೂಡುವುದೇ ಒಂದೇ ಕಾರಣಕ್ಕಾಗಿ ವಿಧೇಯಕ ತರುತ್ತಿದ್ದೀರ. ಕೋರ್ಟ್ ಆದೇಶದ ಅನ್ವಯ ಕೆಲ ತಿದ್ದುಪಡಿ ತರಬಹುದು. ಈ ವಿಧೇಯಕದ ಅಗತ್ಯ ಇಲ್ಲ. ನಿಮಗೆ ಅಧಿಕಾರ ವಿಕೇಂದ್ರೀಕರಣದ ಇಷ್ಟ ಅಲ್ಲ. ಇದರಿಂದ ನಿಮಗೆ ಪರಿಹಾರ ಸಿಗಲ್ಲ. ಚುನಾವಣೆ ಮುಂದೂಡುವ ನಿಟ್ಟಿನಲ್ಲಿ ಕಾಲ ಕಳೆಯುತ್ತಿದ್ದೀರಾ. ಚುನಾವಣೆ ಮಾಡಿದರೆ ಜನ ಪಾಠ ಕಲಿಸ್ತಾರೆ ಎಂಬ ಭಯ ಇದೆ. ಆ ಭಯಕ್ಕೆ ಹೆದರಿ ಅದರಿಂದ ತಪ್ಪಿಸಿಕೊಳ್ಳಲು ಈ ವಿಧೇಯಕ ತರುತ್ತಿದ್ದೀರಾ. ಇದೊಂದು ಬೋಗಸ್ ತಿದ್ದುಪಡಿಯಾಗಿದೆ. ಇದರಿಂದ ತಕ್ಷಣ ಚುನಾವಣೆ ಮುಂದೂಡುವ ಒಂದು ತಂತ್ರವಷ್ಟೇ. ಇದಕ್ಕೆ ನಮ್ಮ ವಿರೋಧ ಇದೆ ಎಂದು ಕಿಡಿಕಾರಿದರು.
ಸಭಾತ್ಯಾಗದ ಮಧ್ಯೆ ವಿಧೇಯಕ ಅಂಗೀಕಾರ:
ಇತ್ತ ಸಭಾತ್ಯಾಗದ ಮಧ್ಯೆ ತಾ.ಪಂ, ಜಿ.ಪಂ ಕ್ಷೇತ್ರ ಪುನರ್ ವಿಂಗಡನೆ ಗೊಳಿಸುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ವಿಧೇಯಕ ವಿರೋಧಿಸಿ ಸಭಾತ್ಯಾಗ ಮಾಡಿದರು.
ಇದನ್ನೂ ಓದಿ: ದೇಶ ವ್ಯಾಪಾರಿಗಳ ಕೈಗೆ ಹೋಗಿದೆ, ಬೆಲೆ ಏರಿಕೆಯ ಅಪರಾಧಿಗಳು ನಾವು: ಕೆ.ಆರ್.ರಮೇಶ್ ಕುಮಾರ್