ಬೆಂಗಳೂರು: ರಾಜಕೀಯ ಪಕ್ಷಗಳು ಮಾತ್ರವಲ್ಲ, ಇಡೀ ರಾಜ್ಯವೇ ಎದುರು ನೋಡುತ್ತಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ದಿನಾಂಕ ಇಂದು ಘೋಷಣೆಯಾಗಿದೆ. ಮೇ 10 ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ದಿನಾಂಕ ಘೋಷಣೆಯಾಗುವ ಮೂಲಕ ರಾಜ್ಯ ಚುನಾವಣಾ ಅಖಾಡ ಗರಿಗೆದರಿ ಸಜ್ಜಾಗಿದೆ. ಪಕ್ಷಗಳು ಮೈಕೊಡವಿಕೊಂಡು ಸ್ಪರ್ಧೆಗೆ ಸಿದ್ಧವಾಗುತ್ತಿದ್ದು, ಸದ್ಯ ವಿಧಾನಸಭೆಯ ಬಲಾಬಲ ಏನಿದೆ ನೋಡೋಣ.
ಪಕ್ಷಗಳ ಬಲಾಬಲ: ರಾಜ್ಯದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿವೆ. ಪಕ್ಷ ಅಧಿಕಾರಕ್ಕೇರಲು ಗಳಿಸಬೇಕಾದ ಶಾಸಕರ ಸಂಖ್ಯೆ -113. ಸದ್ಯ ಬಿಜೆಪಿ 118, ಕಾಂಗ್ರೆಸ್ 69, ಜೆಡಿಎಸ್ 32, ಬಿಎಸ್ಪಿ 1, ಪಕ್ಷೇತರರು 2 ಹಾಗು 2 ಸ್ಥಾನಗಳು ತೆರವಾಗಿವೆ.
2018 ರ ಚುನಾವಣಾ ಫಲಿತಾಂಶ: 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಬಹುಮತ ಸಿಕ್ಕಿರಲಿಲ್ಲ. ಬಿಜೆಪಿ ಏಕಮಾತ್ರ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಮೇ 12, 2018ರಲ್ಲಿ ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಎರಡು ಕ್ಷೇತ್ರಗಳಾದ ರಾಜರಾಜೇಶ್ವರಿ ನಗರ ಹಾಗೂ ಜಯನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಮತಚೀಟಿ ಅಕ್ರಮ ಆರೋಪ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಹಾಗೂ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ನಿಧನದಿಂದ ಜಯನಗರ ಕ್ಷೇತ್ರದ ಚುನಾವಣೆ ಮೇ 28 ರಂದು ನಡೆದಿತ್ತು.
ಮೇ 15 ರಂದು ನಡೆದ ಮತ ಎಣಿಕೆಯಲ್ಲಿ 222 ಕ್ಷೇತ್ರಗಳ ಪೈಕಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಪಕ್ಷೇತರರು 2 ಸ್ಥಾನದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಆದರೆ ಯಾವ ಪಕ್ಷವೂ 113 ಮ್ಯಾಜಿಕ್ ನಂಬರ್ ತಲುಪುವಲ್ಲಿ ಸಫಲವಾಗಿರಲಿಲ್ಲ. ಮೇ 28 ರಂದು ಬಾಕಿ ಇದ್ದ ಎರಡು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆ ಮೂಲಕ 2018 ರಲ್ಲಿ ಕಾಂಗ್ರೆಸ್ ಒಟ್ಟು 71 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು.
2018 ರ ಕಣದಲ್ಲಿ 2,622 ಅಭ್ಯರ್ಥಿಗಳಿಂದ ಸ್ಪರ್ಧೆ: ರಾಜ್ಯದ 224 ಕ್ಷೇತ್ರಗಳಲ್ಲಿ 36 ಎಸ್ಸಿ ಮೀಸಲು ಕ್ಷೇತ್ರವಾಗಿದ್ದರೆ, 15 ಎಸ್ಟಿ ಮೀಸಲು ಕ್ಷೇತ್ರವಾಗಿವೆ. 2018 ರ ಚುನಾವಣೆಯಲ್ಲಿ 2,622 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಈ ಪೈಕಿ 217 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಇದನ್ನೂ ಓದಿ: ಇಂದು 11.30ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ