ಬೆಂಗಳೂರು: ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಬೀಳಲು ಪ್ರಮುಖ ಕಾರಣವಾಗಿ ತದನಂತರ ಅಹರ್ನಗೊಂಡು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿರುವ ಅನೇಕ ಅನರ್ಹ ಶಾಸಕರು ಗೆಲುವಿನ ನಗೆ ಬೀರಿದ್ದು, ಪ್ರಭಾವಿ ಮುಖಂಡರಾದ ಎಂಟಿಬಿ ನಾಗರಾಜ್ ಹಾಗೂ ಹುಣಸೂರಿನ ಹೆಚ್ ವಿಶ್ವನಾಥ್ ಹೊರತುಪಡಿಸಿ ಉಳಿದವರು ಗೆಲುವಿನ ನಗೆ ಬೀರಿದ್ದಾರೆ.
ಅನರ್ಹರಿಂದ ತೆರವಾಗಿದ್ದ 15 ಕ್ಷೇತ್ರಗಳಿಗೆ ಕಳೆದ ಡಿಸೆಂಬರ್ 05 ರಂದು ಉಪ ಚುನಾವಣೆ ನಡೆದಿತ್ತು. ಚುನಾವಣೆ ನಡೆಯುವುದಕ್ಕೂ ಮುಂಚಿತವಾಗಿ ಪಕ್ಷ ದ್ರೋಹ, ಹಣದ ಹಾಗೂ ಅಧಿಕಾರದ ಆಸೆಗಾಗಿ ಇವರು ದ್ರೋಹ ಮಾಡಿ ಪಕ್ಷಾಂತರಗೊಂಡಿದ್ದರು ಎಂದು ಪ್ರಚಾರ ಸಹ ನಡೆದಿದ್ದವು. ಆದರೆ, ಮತದಾರ ಪ್ರಭು ಮತ್ತೊಮ್ಮೆ ಬಿಎಸ್ವೈ ಸರ್ಕಾರಕ್ಕೆ ಸ್ಪಷ್ಟ ಬಹುಮತ ನೀಡಿದ್ದು, ಅನರ್ಹರೇ ಅರ್ಹರು ಎಂಬ ಬಿರುದು ನೀಡಿದ್ದಾರೆ.
15 ವಿಧಾನಸಭಾ ಕ್ಷೇತ್ರಗಳ ಪೈಕಿ ಗೋಕಾಕ್ದಲ್ಲಿ ರಮೇಶ್ ಜಾರಕಿಹೊಳಿ, ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಹಿರೇಕೆರೂರಿನಲ್ಲಿ ಬಿ.ಸಿ. ಪಾಟೀಲ್, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್, ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್, ರಾಣೆಬೆನ್ನೂರಿನಲ್ಲಿ ಅರುಣ್ ಕುಮಾರ್ ಪೂಜಾರ, ವಿಜಯನಗರದಲ್ಲಿ ಆನಂದ್ ಸಿಂಗ್, ಕೆ.ಆರ್. ಪುರದಲ್ಲಿ ಭೈರತಿ ಬಸವರಾಜು, ಯಶವಂತಪುರದಲ್ಲಿ ಎಸ್.ಟಿ ಸೋಮಶೇಖರ್, ಕೆ.ಆರ್. ಪೇಟೆಯಲ್ಲಿ ನಾರಾಯಣ ಗೌಡ, ಮಹಾಲಕ್ಷ್ಮೀ ಲೇಔಟ್ನಲ್ಲಿ ಗೋಪಾಲಯ್ಯ, ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಶಾಕ್ ನೀಡಿದ್ದಾರೆ.
ಉಳಿದಂತೆ ಹೊಸಕೋಟೆಯಲ್ಲಿ ಎಂಟಿಬಿಗೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಹುಣಸೂರಿನಲ್ಲಿ ಕಾಂಗ್ರೆಸ್ನ ಹೆಚ್.ಪಿ ಮಂಜುನಾಥ್ ಬಿಜೆಪಿಯ ವಿಶ್ವನಾಥ್ಗೆ ಸೋಲಿನ ರುಚಿ ತೋರಿಸಿದ್ದಾರೆ. ಉಳಿದಂತೆ ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಗೆಲುವು ದಾಖಲು ಮಾಡಿದ್ದಾರೆ.
ಆಪರೇಷನ್ ಕಮಲ ನಡೆಸಿ ಸರ್ಕಾರ ರಚನೆ ಮಾಡಿದ್ದ ಬಿಎಸ್ವೈ ಮುಂದಿನ ಮೂರು ವರ್ಷ ಸ್ಥಿರ ಸರ್ಕಾರ ನಡೆಸಬೇಕಾದ್ರೆ ಕನಿಷ್ಠ 7 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದೀಗ 12 ಕ್ಷೇತ್ರಗಳಲ್ಲಿ ಗೆದ್ದು ಕಮಲ ಪಾಳಯ ಮತ್ತೊಮ್ಮೆ ಜಯಭೇರಿ ಬಾರಿಸಿದೆ.
ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು!?
1. ಗೋಕಾಕ - ರಮೇಶ್ ಜಾರಕಿಹೊಳಿ (ಬಿಜೆಪಿ)
2.ಅಥಣಿ - ಮಹೇಶ್ ಕುಮಟಳ್ಳಿ (ಬಿಜೆಪಿ)
3. ಹಿರೇಕೆರೂರು - ಬಿ.ಸಿ. ಪಾಟೀಲ್ (ಬಿಜೆಪಿ)
4. ಕಾಗವಾಡ - ಶ್ರೀಮಂತ ಪಾಟೀಲ್(ಬಿಜೆಪಿ)
5. ಯಲ್ಲಾಪುರ - ಶಿವರಾಮ್ ಹೆಬ್ಬಾರ್(ಬಿಜೆಪಿ)
6. ರಾಣಿಬೆನ್ನೂರು - ಅರುಣ್ ಕುಮಾರ್ ಪೂಜಾರ (ಬಿಜೆಪಿ)
7. ವಿಜಯನಗರ - ಆನಂದ್ ಸಿಂಗ್ (ಬಿಜೆಪಿ)
8. ಕೆ.ಆರ್. ಪುರ - ಭೈರತಿ ಬಸವರಾಜು (ಬಿಜೆಪಿ)
9. ಯಶವಂತಪುರ - ಎಸ್.ಟಿ ಸೋಮಶೇಖರ್ (ಬಿಜೆಪಿ)
10. ಕೆ.ಆರ್. ಪೇಟೆ - ನಾರಾಯಣ ಗೌಡ (ಬಿಜೆಪಿ)
11. ಮಹಾಲಕ್ಷ್ಮೀ ಲೇಔಟ್ - ಗೋಪಾಲಯ್ಯ (ಬಿಜೆಪಿ)
12. ಚಿಕ್ಕಬಳ್ಳಾಪುರ - ಕೆ. ಸುಧಾಕರ್ (ಬಿಜೆಪಿ)
13. ಶಿವಾಜಿನಗರ - ರಿಜ್ವಾನ್ ಅರ್ಷದ್ (ಕಾಂಗ್ರೆಸ್)
14. ಹುಣಸೂರು - ಹೆಚ್.ಪಿ. ಮಂಜುನಾಥ್ (ಕಾಂಗ್ರೆಸ್)
15. ಹೊಸಕೋಟೆ - ಶರತ್ ಬಚ್ಚೇಗೌಡ (ಬಿಜೆಪಿ ಬಂಡಾಯ ಅಭ್ಯರ್ಥಿ)