ಬೆಂಗಳೂರು: ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ಹಿರಿಯ ನಟ ಅಜಯ್ ದೇವಗನ್ ವಿರುದ್ಧ ಆಕ್ರೋಶದ ಸುರಿಮಳೆ ವ್ಯಕ್ತವಾಗುತ್ತಿದೆ. ಅಜಯ್ ದೇವಗನ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಈಗ ವಿವಿಧ ಸಂಘ - ಸಂಸ್ಥೆಗಳಿಂದಲೂ ಅಸಮಾಧಾನ ವ್ಯಕ್ತವಾಗುತ್ತಿವೆ.
ಅಜಯ್ ದೇವಗನ್ ಹೇಳಿಕೆ ಖಂಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ರಸ್ತೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಳಗದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಜಯ್ ದೇವಗನ್ ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು. ಆದರೆ, ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಪರಿಣಾಮ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ
ಕರವೇ ರಾಜ್ಯ ಉಪಾಧ್ಯಕ್ಷ ಶಿವರಾಜಗೌಡ ಮಾತನಾಡಿ, ಹಿಂದಿ ರಾಷ್ಟ್ರೀಯ ಭಾಷೆ ಎಂಬ ಅಜಯ್ ದೇವಗನ್ ಹೇಳಿಕೆ ಸರಿಯಲ್ಲ. ಪದೇ ಪದೆ ಕನ್ನಡಕ್ಕೆ ಅವಮಾನವಾಗುವುದನ್ನು ನಾವು ಸಹಿಸುವುದಿಲ್ಲ. ರಾಷ್ಟ್ರಿಯ ಭಾಷೆ ಹಿಂದಿ ಎಂಬ ವಿಚಾರವಾಗಿ ಉತ್ತರ ಭಾರತದ ಯಾರೇ ಹೇಳಿಕೆ ನೀಡಿದರೂ ನಾವು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ಇದನ್ನೂ ಓದಿ: ದೇಶದ 14 ಭಾಷೆಗಳಲ್ಲಿ ಹಿಂದಿ ಕೂಡ ಒಂದು: ಕನ್ನಡಕ್ಕೆ ನಮ್ಮ ಮೊದಲ ಪ್ರಾತಿನಿಧ್ಯ -ಡಿಕೆಶಿ