ಬೆಂಗಳೂರು: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಾಗಿರುವ ಸುಮಾರು 20 ಸಾವಿರ ಹುದ್ದೆಗಳಿಗೆ ಕೇಂದ್ರ ಸಿಬ್ಬಂದಿ ಆಯೋಗ (ಎಸ್‌ಎಸ್‌ಸಿ) ನಡೆಸುವ ಪರೀಕ್ಷೆಗಳಲ್ಲಿ 'ಹಿಂದಿ ಮತ್ತು ಇಂಗ್ಲೀಷ್'ನಲ್ಲಿ ಮಾತ್ರ ಉತ್ತರ ಬರೆಯಲು ಅವಕಾಶ ನೀಡಿದೆ. ಇದರಿಂದ ಕನ್ನಡ ಮಾಧ್ಯಮದಲ್ಲಿ 'ಪದವಿ ಶಿಕ್ಷಣ' ಪಡೆದಿರುವ ಕರ್ನಾಟಕದ ಲಕ್ಷಾಂತರ ನಿರುದ್ಯೋಗಿ ಯುವಕ - ಯುವತಿಯರು ಕೇಂದ್ರ ಸರ್ಕಾರದ ಉದ್ಯೋಗದ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂದು ದೂರಿ, ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಫ್ರೀಡಂ ಪಾರ್ಕಿನಲ್ಲಿ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾಗಿರುವ ರಾಜ್ಯಗಳ ಒಕ್ಕೂಟ ದೇಶವಾಗಿರುವ ಭಾರತದಲ್ಲಿ, ಕೇಂದ್ರ ಸರ್ಕಾರದ ಉದ್ಯೋಗಗಳು ಹಿಂದಿ ಭಾಷಿಕರಿಗೆ ಮೀಸಲಿಟ್ಟಂತೆ ಇರುವ ವ್ಯವಸ್ಥೆಯಿಂದ, ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದರಿಂದ, ಹಿಂದಿ ಮಾಧ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುವವರು ಸುಲಭವಾಗಿ ಕೇಂದ್ರ ಸರ್ಕಾರದ ಉದ್ಯೋಗಗಳನ್ನು ಪಡೆಯಲಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
ಕನ್ನಡ ಸೇರಿದಂತೆ ಹಿಂದಿಯೇತರ ಭಾಷೆಗಳ ಅಭ್ಯರ್ಥಿಗಳು ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆ ಇರುವುದರಿಂದ, ಕೇಂದ್ರ ಸರ್ಕಾರದ ಉದ್ಯೋಗಗಳನ್ನು ಪಡೆಯಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಇರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಕೇಂದ್ರ ಸರ್ಕಾರದ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪರೀಕ್ಷೆಗಳು ಆಯಾ ರಾಜ್ಯದ ಭಾಷೆಯಲ್ಲೇ ನಡೆಯಲಿ: ರಾಹುಲ್ ಗಾಂಧಿ