ಬೆಂಗಳೂರು : ವಿವಿಧ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರೆ ನೀಡಿರುವ ಬಂದ್ ಮುಂದೂಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಹಿರಿಯರಾದ ವಾಟಾಳ್ ನಾಗರಾಜ್ ಅವರು ಕರೆಕೊಟ್ಟ ಬಂದ್‌ಗೆ ಬೆಂಬಲ ಸೂಚಿಸಿದ್ದೆವು. ಆದರೆ, ಚಿತ್ರರಂಗದಲ್ಲಿ ಮೂರು ಚಿತ್ರಗಳು ಬಿಡುಗಡೆಯಾಗ್ತಿರೋದ್ರಿಂದ ಹಿರಿಯ ನಟರು ಮನವಿ ಮಾಡಿದ್ದಾರೆ. ಹೋಟೆಲ್ ಉದ್ಯಮಿಗಳು ಕೂಡ ನಷ್ಟದಲ್ಲಿದ್ದಾರೆ.
ನೈಟ್ ಕರ್ಫ್ಯೂನಿಂದ ಮತ್ತಷ್ಟು ತೊಂದರೆಗೊಳಗಾಗಿದ್ದಾರೆ. ಹೀಗಾಗಿ, ಬಂದ್ ಮುಂದೂಡಬೇಕು. ನಮ್ಮ ಬೆಂಬಲದ ಬಗ್ಗೆ ನಾಳೆ ಬೆಳಗ್ಗೆ ಹತ್ತು ಗಂಟೆಯೊಳಗೆ ತಿಳಿಸುತ್ತೇವೆ ಎಂದರು.
ಓದಿ: ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ ಇನ್ನಿಲ್ಲ
ಇನ್ನು ಪತ್ರದಲ್ಲಿ ಬರೆದಿರುವ ಪ್ರವೀಣ್ ಶೆಟ್ಟಿ, ಡಿಸೆಂಬರ್ 22ರಂದು ಚರ್ಚಿಸಿ ಎಲ್ಲರೂ ಬಂದ್ ದಿನಾಂಕ ನಿರ್ಧಾರ ಮಾಡಲಾಗಿದೆ. ಆದರೆ, ನಂತರ ನಡೆದ ಹಲವಾರು ಬೆಳವಣಿಗೆಗಳು ಈ ನಿರ್ಧಾರ ಪ್ರಸ್ತುತ ಸರಿ ಇಲ್ಲವೆಂಬ ಭಾವನೆ ಮೂಡುತ್ತಿದೆ. ಕಾರಣ ಒಮಿಕ್ರಾನ್ ಈಗಾಗಲೇ ತನ್ನ ಕಬಂಧ ಬಾಹುಗಳನ್ನ ಚಾಚುತ್ತಿದೆ.
ಇದರ ಪರಿಣಾಮವಾಗಿ ಸೆಕ್ಷನ್ 144 ಹಾಗೂ ರಾತ್ರಿ ಕರ್ಫ್ಯೂ ಕೂಡ ಜಾರಿ ಮಾಡಲಾಗಿದೆ. ಈಗಾಗಲೇ ಕೋವಿಡ್ ಕಾರಣದಿಂದ ಸಾಕಷ್ಟು ಸಂಕಷ್ಟದಲ್ಲಿರುವ ವರ್ತಕರು, ವಾಣಿಜ್ಯೋದ್ಯಮಿಗಳು, ಹೋಟೆಲ್ ಮಾಲೀಕರು ನಮ್ಮ ಈ ನಿರ್ಧಾರದಿಂದ ಸಾಕಷ್ಟು ಆತಂಕದಲ್ಲಿದ್ದಾರೆ ಎಂದು ಬರೆದಿದ್ದಾರೆ.
ಹಳೆ ವರ್ಷದ ಕೊನೆಯಲ್ಲಿ ಹೊಸ ವರ್ಷದ ಆರಂಭದಲ್ಲಿ ಒಳ್ಳೆಯ ವ್ಯಾಪಾರ, ವಹಿವಾಟನ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರು ಬಹಳ ನಷ್ಟ ಹೊಂದುತ್ತಾರೆ. ಸದಾಕಾಲ ನಮ್ಮ ಜೊತೆ ನಿಲ್ಲುತ್ತಿದ್ದ ಚಿತ್ರೋದ್ಯಮದ ಕೆಲವು ಸಂಘಟನೆಗಳು ತಮ್ಮ ಅಸಮಾಧಾನವನ್ನು ಹೊರ ಹಾಕಿವೆ. ಸಾರ್ವಜನಿಕ ವಲಯ ಹಾಗೂ ಬಹಳ ಪ್ರಮುಖವಾಗಿ ಬೆಳಗಾವಿಯ ಕ್ರಿಯಾ ಸಮಿತಿ ಕೂಡ ನಮ್ಮ ಬಂದ್‌ಗೆ ಬೆಂಬಲ ನೀಡುತ್ತಿಲ್ಲ.
ನಮ್ಮ ಸಂಘಟನೆಯ ಪದಾಧಿಕಾರಿಗಳಲ್ಲೂ ಬಂದ್ ಬಗ್ಗೆ ಒಮ್ಮತ ಸಾಧ್ಯವಾಗಿಲ್ಲ. ಈ ಎಲ್ಲಾ ಕಾರಣಗಳನ್ನು ಗಮನಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ಬಂದ್ ದಿನಾಂಕವನ್ನ ಮೂಂದೂಡುವುದು ಸೂಕ್ತ. ಮುಂದಿನ ಸಭೆಯಲ್ಲಿ ಚರ್ಚಿಸಿ ದಿನಾಂಕ ನಿಗದಿಗೊಳಿಸೋಣ ಎಂದು ಪ್ರವೀಣ್ ಶೆಟ್ಟಿ ಪತ್ರದಲ್ಲಿ ಬರೆದಿದ್ದಾರೆ.