ಬೆಂಗಳೂರು: ಕಾಲ ಬದಲಾದಂತೆ ಮಹಿಳೆಯರು ಎಲ್ಲ ರಂಗದಲ್ಲೂ ಸಕ್ರಿಯವಾಗಿದ್ದಾರೆ. ಅದಕ್ಕೆ ಪೊಲೀಸ್ ಇಲಾಖೆಯೂ ಹೊರತೇನಲ್ಲ. ಇಂತಹ ಮಹಿಳಾ ಪೊಲೀಸ್ ಮಣಿಗಳು ಈಗ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನ ಮಹಿಳಾ ರಾಜ್ಯ ಪೊಲೀಸ್ ಮೀಸಲು ಪಡೆ(ಕೆಎಸ್ಆರ್ಪಿ) ಮಹಿಳಾ ಕಾನ್ಸ್ಟೇಬಲ್ಗಳು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದು, ತಾವು ಯಾವುದಕ್ಕೂ ಕಡಿಮೆ ಇಲ್ಲ ಎಂದು ಮಹಿಳಾ ಪೇದೆಗಳು ಕರಾಟೆ ಕಲಿಯುತ್ತಿದ್ದಾರೆ. ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಖುದ್ದು ಮಹಿಳಾ ಪೇದೆಗಳಿಗೆ ಕರಾಟೆ ತರಬೇತಿ ಕೊಡಿಸುತ್ತಿದ್ದಾರೆ.
ಕೆಎಸ್ಆರ್ಪಿ ಮಹಿಳಾ ಬೆಟಾಲಿಯನ್ ಸಿಬ್ಬಂದಿಯಿಂದ ಸರ್ಕಾರಿ ಶಾಲಾ - ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಸ್ವ ರಕ್ಷಣೆ ತರಬೇತಿ ನೀಡಲು ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಅವರ ವಿಶೇಷ ಪ್ರಯತ್ನ ಇದಾಗಿದೆ. ಮೊದಲಿಗೆ ರಾಜ್ಯದ ಆಯ್ದ 15 ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಪ್ರಯೋಗಾತ್ಮಕವಾಗಿ ನಡೆಸಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಮಾರ್ಚ್. 9 ರಿಂದ ಬೆಂಗಳೂರು ಮತ್ತು ಬೆಳಗಾವಿಯ ಹಲವೆಡೆ ಚಾಲನೆ ನೀಡಲು ಚಿಂತನೆ ನಡೆಸಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರಮುಖವಾಗಿ ಪರಿಗಣಿಸಿ ಕರಾಟೆ ತರಬೇತಿ ನೀಡಲು ಈಗಾಗಲೇ ಪ್ರಾಥಮಿಕವಾಗಿ 50 ಮಹಿಳಾ ಕೆಎಸ್ಆರ್ಪಿ ಸಿಬ್ಬಂದಿಗೆ ಕರಾಟೆ ತರಬೇತಿ ನೀಡಲಾಗಿದೆ. ಇನ್ನೂ ಮೊದಲ ಹಂತದಲ್ಲಿ ಬೆಳಗಾವಿಯಲ್ಲಿ ಒಂದು ಬ್ಯಾಚ್, ಬೆಂಗಳೂರಿನಲ್ಲಿ ಒಂದು ಬ್ಯಾಚ್ ಸಿದ್ಧವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿ ಮಕ್ಕಳು ಮತ್ತು ಮಹಿಳಾ ಸದಸ್ಯರಿಗೂ ಆತ್ಮರಕ್ಷಣೆಗಾಗಿ ತರಬೇತಿಗೆ ಚಿಂತನೆ ನಡೆಸಲಾಗಿದ್ದು, ಹಂತ ಹಂತವಾಗಿ ರಾಜ್ಯದೆಲ್ಲೆಡೆ ಜಾರಿಗೆ ತರಲು ಯೋಚಿಸಲಾಗಿದೆ.