ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಜಾರಿಗೆ ತರಲಾಗಿರುವ ಎಸ್ಸಿಎಸ್ಪಿ - ಟಿಎಸ್‌ಪಿ ಅನುದಾನ ಬಳಕೆಯಲ್ಲಿ ರಾಜ್ಯ ಸರ್ಕಾರದ ನಿರಾಸಕ್ತಿ ಎದ್ದು ಕಾಣುತ್ತಿದೆ. 2022-23ರ ಸಾಲಿನ ಮೊದಲ ನಾಲ್ಕು ತಿಂಗಳಲ್ಲಿನ ಪ್ರಗತಿ ನಿರಾಶಾದಾಯಕವಾಗಿದೆ.
2022-23 ಸಾಲಿನಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟುಗಳ ಉಪ ಹಂಚಿಕೆ(SCSP/TSP)ಯಲ್ಲಿ ಒಟ್ಟು 31,635.54 ಕೋಟಿ ರೂ.ಹಂಚಿಕೆ ಮಾಡಿದೆ. ಈ ಪೈಕಿ SCSPಗೆ 22,474.01 ಕೋಟಿ ರೂ. ಮತ್ತು TSPಗೆ 9,161.53 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಅನುದಾನವನ್ನು ಆಯಾ ಇಲಾಖೆಗಳು ಅನುಸೂಚಿತ ಜಾತಿ ಹಾಗೂ ಪಂಗಡದ ಅಭಿವೃದ್ಧಿಗಾಗಿ ಮಾತ್ರ ಬಳಸಬೇಕು.
ಆದರೆ 2022-23ರ ಸಾಲಿನ ಮೊದಲ ನಾಲ್ಕು ತಿಂಗಳಲ್ಲಿ SCSP-TSP ಅನುದಾನ ಬಳಕೆಯಲ್ಲಿ ಬಹುತೇಕ ಇಲಾಖೆಗಳು ನಿರಾಸಕ್ತಿ ತೋರುತ್ತಿವೆ. ಬಹುತೇಕ ಇಲಾಖೆಗಳು ಅನುದಾನ ಬಳಕೆಯೇ ಮಾಡಿಲ್ಲ. ಬೆರಳೆಣಿಕೆಯಷ್ಟು ಇಲಾಖೆಗಳು ಈ ಅನುದಾನ ಬಳಕೆಯಲ್ಲಿ ಉತ್ತಮ ಪ್ರಗತಿ ಕಂಡಿದೆ.
SCSPಯ ಪ್ರಗತಿ ಕೇವಲ 12.56%: SCSPಯಡಿ 2022-23 ಸಾಲಿನಲ್ಲಿ ಒಟ್ಟು 22,474.01 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ ಕಳೆದ ನಾಲ್ಕು ತಿಂಗಳಲ್ಲಿ ಬಿಡುಗಡೆಯಾದ ಅನುದಾನ 5,117.80 ಕೋಟಿ ರೂಪಾಯಿ.
ವಿವಿಧ ಇಲಾಖೆಗಳು ಒಟ್ಟು 2,823.40 ಕೋಟಿ ರೂ. ಅನುಸೂಚಿತ ಜಾತಿಗಳ ಉಪ ಹಂಚಿಕೆಯಡಿ ಖರ್ಚು ಮಾಡಿದೆ. ಅಂದರೆ ಒಟ್ಟು ಅನುದಾನ ಬಿಡುಗಡೆ ಪ್ರತಿ 55.17% ಖರ್ಚು ಮಾಡಿದೆ. ಒಟ್ಟು ಸಂಚಿಕೆಯ ಪ್ರತಿ ಈವರೆಗೆ ಕೇವಲ 12.56% ಮಾತ್ರ ಪ್ರಗತಿ ಕಾಣಲಾಗಿದೆ. ಒಟ್ಟು 15 ಇಲಾಖೆಗಳು ತೀರಾ ಕಳಪೆ ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಸಾಂಖ್ಯಿಕ ಹಾಗೂ ಯೋಜನಾ ಇಲಾಖೆ ಅಂಕಿಅಂಶ ನೀಡಿದೆ.
TSPಯ ಪ್ರಗತಿ ಕೇವಲ 13.59%: TSPಯಡಿ 2022-23 ಸಾಲಿನಲ್ಲಿ ಒಟ್ಟು 9,161.53 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಕಳೆದ ನಾಲ್ಕು ತಿಂಗಳಲ್ಲಿ ಬಿಡುಗಡೆಯಾದ ಅನುದಾನ 1,918.25 ಕೋಟಿ ರೂಪಾಯಿ.
ವಿವಿಧ ಇಲಾಖೆಗಳು ಕಳೆದ ನಾಲ್ಕು ತಿಂಗಳಲ್ಲಿ ಬುಡಕಟ್ಟುಗಳ ಉಪಹಂಚಿಕೆಯಡಿ ಖರ್ಚು ಮಾಡಿದ್ದು 1,244.60 ಕೋಟಿ ರೂಪಾಯಿ. ಅಂದರೆ ಒಟ್ಟು ಅನುದಾನ ಬಿಡುಗಡೆ ಪ್ರತಿ 64.88% ಖರ್ಚು ಮಾಡಲಾಗಿದೆ. ಆದರೆ ಒಟ್ಟು ಹಂಚಿಕೆಯ ಮುಂದೆ ಈವರೆಗೆ ಖರ್ಚು ಮಾಡಿದ್ದು ಕೇವಲ 13.59%.
ಕಳಪೆ ಪ್ರಗತಿ ಕಂಡ ಇಲಾಖೆಗಳು ಯಾವುವು?:
- ಕೃಷಿ ಇಲಾಖೆ: ಎಸ್ಸಿಎಸ್ಪಿ- 9.34% , ಟಿಎಸ್‌ಪಿ- 5.25%
- ಆಹಾರ ಇಲಾಖೆ: ಎಸ್ಸಿಎಸ್ಪಿ- 9.08%, ಟಿಎಸ್‌ಪಿ- 9.41%
- ಅರಣ್ಯ,ಪರಿಸರ ಇಲಾಖೆ: ಎಸ್ಸಿಎಸ್ಪಿ- 12.17%, ಟಿಎಸ್‌ಪಿ- 2.39%
- ಉನ್ನತ ಶಿಕ್ಷಣ ಇಲಾಖೆ: ಎಸ್ಸಿಎಸ್ಪಿ-1.11%, ಟಿಎಸ್‌ಪಿ- 1.38%
- ಗೃಹ ಇಲಾಖೆ: ಎಸ್ಸಿಎಸ್ಪಿ - 0%, ಟಿಎಸ್‌ಪಿ- 0%
- ಐಟಿ/ಬಿಟಿ ಇಲಾಖೆ: ಎಸ್ಸಿಎಸ್ಪಿ- 6.25%, ಟಿಎಸ್‌ಪಿ- 11.04%
- ಶಿಕ್ಷಣ ಇಲಾಖೆ: ಎಸ್ಸಿಎಸ್ಪಿ- 6.92%, ಟಿಎಸ್‌ಪಿ- 8.09%
- ಕಂದಾಯ ಇಲಾಖೆ: ಎಸ್ಸಿಎಸ್ಪಿ- 0.77%, ಟಿಎಸ್‌ಪಿ- 0.09%
- ಗ್ರಾಮೀಣಾಭಿವೃದ್ಧಿ ಇಲಾಖೆ: ಎಸ್ಸಿಎಸ್ಪಿ- 2.81%, ಟಿಎಸ್‌ಪಿ- 2.99%
- ಪ್ರವಾಸೋದ್ಯಮ ಇಲಾಖೆ: ಎಸ್ಸಿಎಸ್ಪಿ- 0%, ಟಿಎಸ್‌ಪಿ- 0%
- ಜಲಸಂಪನ್ಮೂಲ ಇಲಾಖೆ: ಎಸ್ಸಿಎಸ್ಪಿ- 7.16%, ಟಿಎಸ್‌ಪಿ- 10.38%
- ಯುವ ಸಬಲೀಕರಣ, ಕ್ರೀಡಾ ಇಲಾಖೆ: ಎಸ್ಸಿಎಸ್ಪಿ- 0.40%, ಟಿಎಸ್‌ಪಿ- 2.40%
- ಕೌಶಲ್ಯಾಭಿವೃದ್ಧಿ ಇಲಾಖೆ: ಎಸ್ಸಿಎಸ್ಪಿ- 2.91%, ಟಿಎಸ್‌ಪಿ- 2.85%
ಇದನ್ನೂ ಓದಿ : ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣ : ಬಿ ರಿಪೋರ್ಟ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಕುಟುಂಬಸ್ಥರು