ಬೆಂಗಳೂರು: ರಾಮನಗರದ ಕಪಾಲಿ ಬೆಟ್ಟದಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಏಸು ಪ್ರತಿಮೆ ಸಂಬಂಧ ಇನ್ನೂ ವರದಿ ಸಿದ್ಧವಾಗಿಲ್ಲ. ಈ ಬಗ್ಗೆ ಯಾವುದೇ ತರಾತುರಿ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.
ವಿಧನಸೌಧದಲ್ಲಿ ಮಾತನಾಡಿದ ಅವರು, ಕಪಾಲಿ ಬೆಟ್ಟದ ಮೇಲಿನ ಏಸು ಪ್ರತಿಮೆ ಬಗ್ಗೆ ಸಾಕಷ್ಟು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈಗ ಅದು ಕಪಾಲಿ ಬೆಟ್ಟವೋ, ಕಪಾಲ ಬೆಟ್ಟವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಕಪಾಲ ಅಂತ ಒಬ್ಬರು ಹೇಳುತ್ತಾರೆ, ಕಪಾಲಿ ಅಂತ ಇನ್ನೊಬ್ಬರು ಹೇಳುತ್ತಾರೆ. ಈಶ್ವರ ಅಂತ ಒಬ್ಬರು ಹೇಳುತ್ತಾರೆ, ಕಾಲಭೈರೇಶ್ವರ ಅಂತ ಇನ್ನು ಕೆಲವರು ಹೇಳುತ್ತಾರೆ. ಏಸು ಅಂತ ಕೆಲವರು ಹೇಳುತ್ತಾರೆ. ಇದು ಅಲ್ಲಿರುವ ಪ್ರಶ್ನೆ. ನಾವು ಈ ಬಗ್ಗೆ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಅಲ್ಲಿ ಈಗಾಗಲೇ ವಿದ್ಯುತ್ ಲೈನ್ ಸಂಪರ್ಕ ನೀಡಲಾಗಿದೆ. ಯಾರ ಆದೇಶದ ಮೇಲೆ ಈ ಸಂಪರ್ಕ ಕಲ್ಪಿಸಲಾಗಿದೆ ಅನ್ನೋದು ಗೊತ್ತಿಲ್ಲ. ಅದನ್ನು ತನಿಖೆ ನಡೆಸುತ್ತಿದ್ದೇನೆ. ಅಲ್ಲಿ ಬೋರ್ ವೆಲ್ ಕೂಡ ಕೊರೆಸಲಾಗಿದೆ. ಅದಕ್ಕೆ ಯಾರು ಅನುಮತಿ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ರಸ್ತೆ ಮಾಡಿದ್ದಾರೆ. ಅದಕ್ಕೆ ಯಾರು ಅನುಮತಿ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ವರದಿ ಬಂದ ಬಳಿಕ ಈ ಎಲ್ಲ ವಿಚಾರಗಳ ಬಗ್ಗೆ ಗೊತ್ತಾಗಲಿದೆ. ಗ್ರಾಂಟ್ ಕಂಡಿಷನ್ ಪ್ರಕಾರ ಎಲ್ಲ ಅನುಮತಿ ಪಡೆದ ಬಳಿಕವೇ ಕಾಮಗಾರಿ ಪ್ರಾರಂಭಿಸಬೇಕು. ಗ್ರಾಂಟ್ ಕಂಡಿಷನ್ ಈಡೇರಿಸಿದ್ದರಾ ಎಂದು ನೋಡಬೇಕು ಎಂದು ವಿವರಿಸಿದರು.
ಕಳೆದ ವಾರದಿಂದ ನಾನು ಬಿಝಿಯಾಗಿದ್ದೆ. ನಮಗೆ ಆತುರ ಏನು ಇಲ್ಲ. ನಿಧಾನವಾಗಿ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲಾ ಇಲಾಖೆಯಿಂದ ವರದಿ ತರಿಸಬೇಕಲ್ಲಾ. ಅರ್ಜೆಂಟ್ ಏನು ಇಲ್ಲ. ಕಾನೂನು ಪ್ರಕಾರ ಎಲ್ಲಾ ರೀತಿಯ ಅಂಶಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಲ್ಲ ಬ್ಲೇಡ್ ಕಂಪನಿಗಳ ಆಸ್ತಿ ಮುಟ್ಟುಗೋಲು:
ರಾಜ್ಯದಲ್ಲಿರುವ ಎಲ್ಲ ಬ್ಲೇಡ್ ಕಂಪನಿಗಳನ್ನು(ಚೀಟಿ, ಸ್ಕೀಂ ಹೆಸರಲ್ಲಿ ಮೋಸ ಮಾಡುವ) ಹುಡುಕಿ ಅವುಗಳನ್ನು ಮಟ್ಟ ಹಾಕಲಾಗುತ್ತದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ಅನುಮಾನ ಬರುವ ಎಲ್ಲ ಕಂಪನಿಗಳನ್ನು ಹುಡುಕಿ, ಅವುಗಳನ್ನು ಮಟ್ಟ ಹಾಕಲು ಡಿಸಿಗಳಿಗೆ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಐಎಂಎ ದೊಡ್ಡ ವಂಚನೆ ಕಂಪನಿಯಾಗಿದೆ. ಯಾವುದೇ ಮುಲಾಜಿಲ್ಲದೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಕಂದಾಯ ಇಲಾಖೆ ಈಗಾಗಲೇ ಐಎಂಎ ಕಂಪನಿಯ ಆಸ್ತಿ ಗುರುತಿಸಿ, ಮುಟ್ಟುಗೋಲು ಹಾಕುತ್ತಿದ್ದೇವೆ. ಅವರ ಇತರ ಆಸ್ತಿಗಳನ್ನು ಹುಡುಕಾಟ ನಡೆಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ತಿಳಿಸಿದರು.
ಇದೇ ರೀತಿ ಇರುವ ವಂಚಕ ಕಂಪನಿಗಳ ಆಸ್ತಿಗಳನ್ನು ಗುರುತಿಸಿದ್ದು, ಅದನ್ನು ಮುಟ್ಟುಗೋಲು ಹಾಕಲಿದ್ದೇವೆ. ನಾನು ಅಧಿಕಾರ ಸ್ವೀಕಾರ ಮಾಡಿದ ಬಳಿಕ ವಂಚನೆ ಮಾಡುವ ಸುಮಾರು 13 ಕಂಪನಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿದ್ದೇವೆ ಎಂದರು.