ಬೆಂಗಳೂರು: ಕಣ್ವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ, ಮುಂದಿನ ಒಂದು ವಾರದೊಳಗೆ ಕಠಿಣ ಕ್ರಮ ಜರುಗಿಸದಿದ್ದರೆ ಪ್ರಕರಣವನ್ನು ಬೇರೊಂದು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಲಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಈ ಕುರಿತು ಕೆ.ಎಸ್. ರಮೇಶ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು, ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ ವಿವರಣೆ ನೀಡಿದರು. ವರದಿ ಪರಿಶೀಲಿಸಿದ ಪೀಠ, ಕಣ್ವ ಸೊಸೈಟಿ ವಿರುದ್ಧ ತನಿಖೆ ನಡೆಸಲು ರಚಿಸಿರುವ ಸಕ್ಷಮ ಪ್ರಾಧಿಕಾರ ಕೆಪಿಐಡಿ ಕಾಯ್ದೆ ಅಡಿ ಲಭ್ಯವಿರುವ ಅಧಿಕಾರವನ್ನು ಬಳಸಿ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಸೊಸೈಟಿಯಲ್ಲಿ ಹೂಡಿಕೆ ಮಾಡಿರುವ ಜನರ ಹಿತರಕ್ಷಣೆ ಕಾಪಾಡುವಂತೆ ಕಾಣಿಸುತ್ತಿಲ್ಲ. ಹೀಗಾಗಿ ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರ ಕಠಿಣ ಕ್ರಮಗಳನ್ನು ಕೈಗೊಂಡು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಲು ಆದೇಶಿಸ ಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಸೊಸೈಟಿಗೆ ಸೇರಿದ 250 ಕೋಟಿ ಮೌಲ್ಯದ 172 ಆಸ್ತಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 10 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ ಮತ್ತೊಂದು ಪೀಠ ತನಿಖೆಗೆ ತಡೆಯಾಜ್ಞೆ ನೀಡಿದೆ. ಹೀಗಾಗಿ ಕ್ರಮ ಜರುಗಿಸುವಲ್ಲಿ ವಿಳಂಬವಾಗುತ್ತಿದೆ ಎಂದರು.
ಅರ್ಜಿದಾರರ ಪರ ವಕೀಲರು ವಾದಿಸಿ, ಪ್ರಕರಣದ ತನಿಖೆ ಸಮರ್ಥವಾಗಿ ನಡೆಯುತ್ತಿಲ್ಲ. ಕೆಪಿಐಡಿ ಕಾಯ್ದೆ ಅನುಸಾರ ಕ್ರಮ ಜರುಗಿಸುತ್ತಿಲ್ಲ. ಸೊಸೈಟಿ ಬಳಿ 642 ಕೋಟಿ ಹಣವಿದೆ. ಇದರಲ್ಲಿ 450 ಕೋಟಿ ಅವ್ಯವಹಾರ ನಡೆದಿದೆ. ಹೂಡಿಕೆದಾರರ ಹಣ ಬಳಸಿ 13 ಸಂಸ್ಥೆಗಳನ್ನು ತೆರೆಯಲಾಗಿದೆ. ಸೊಸೈಟಿಯ ದಾಖಲೆಗಳು ಮತ್ತು ಲೆಕ್ಕದ ಪುಸ್ತಕಗಳನ್ನು ಸಕ್ಷಮ ಪ್ರಾಧಿಕಾರ ಈವರೆಗೆ ವಶಪಡಿಸಿಕೊಂಡಿಲ್ಲ. ಪ್ರಧಾನ ಕಚೇರಿಯಲ್ಲಿನ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡರೆ ಅವ್ಯವಹಾರದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.