ಆನೇಕಲ್(ಬೆಂಗಳೂರು): "ಕುತೂಹಲಕ್ಕೂ ಕೂಡ ಮಾದಕ ವ್ಯಸನದ ಜಾಡು ಹಿಡಿಯದಿರಿ. ಕರ್ನಾಟಕವನ್ನು ಮಾದಕ ವ್ಯಸನಮುಕ್ತ ರಾಜ್ಯವನ್ನಾಗಿಸುವಲ್ಲಿ ರಾಜ್ಯ ಪೊಲೀಸರೊಂದಿಗೆ ಕೈ ಜೋಡಿಸಿ" ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸಿಂಗಾರ ಸಿರಿಯೇ ಹಾಡಿಗೆ ಸಪ್ತಮಿ ಗೌಡ ಹೆಜ್ಜೆ: ಮಾದಕ ವಸ್ತು ನಿಷೇಧ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಜಿಲ್ಲಾ ಪೊಲೀಸ್ ಹಾಗೂ ಇನ್ನಿತರೆ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ 5 ಕಿ.ಮೀ ಓಟ, 3 ಕಿ.ಮೀ ನಡಿಗೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. 'ಮಾದಕ ವಸ್ತುಗಳು ನಮಗೆ ಬೇಡ ಜಾಗೃತಿ ಅಭಿಯಾನ'ದ ಜುಂಬಾ ಡ್ಯಾನ್ಸ್ನಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಸಿಂಗಾರ ಸಿರಿಯೇ ಹಾಡಿಗೆ ಹೆಜ್ಜೆ ಹಾಕಿದರು.
ನಟಿ ಸಪ್ತಮಿ ಗೌಡ ಮಾತನಾಡಿ, ಡ್ರಗ್ಸ್ ಬಗ್ಗೆ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ಕೆಲಸ ಆಗುತ್ತಿದೆ. ಮಾದಕ ವಸ್ತು ಸೇವಿಸುವವರ ಮತ್ತು ಅವರ ಕುಟುಂಬಸ್ಥರ ಜೀವನ ತೊಂದರೆಗೆ ಒಳಗಾಗುತ್ತದೆ. ನಿಮಗೆ ಮಾದಕ ವ್ಯಸನಿಗಳು ಗೊತ್ತಿದ್ದರೆ ಅವರನ್ನು ಅದರಿಂದ ಹೊರತರುವ ಕೆಲಸ ಮಾಡಿ. ಕೌನ್ಸೆಲಿಂಗ್ ಕೊಡಿಸುವ ಪ್ರಯತ್ನ ಮಾಡಿ. ಅವರಿಗೆ ಅದರ ಅಗತ್ಯ ಇರುತ್ತೆ. ಮಾದಕ ವಸ್ತುವಿಗೆ ಕಡಿವಾಣ ಹಾಕೋದು ನಮ್ಮೆಲ್ಲರ ಜವಾಬ್ದಾರಿ. ಆ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಇಂತಹ ವ್ಯಸನಗಳಿಗೆ ಬಲಿಯಾಗಬಾರದು ಎಂದು ಬೆಂಗಳೂರು ಗ್ರಾಮಾಂತರ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲೇ ಇದಕ್ಕೆ ಕಡಿವಾಣ ಹಾಕಬೇಕು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ.
2023ರಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಸಂಬಂಧಿಸಿದ 250 ಪ್ರಕರಣಗಳು ದಾಖಲಾಗಿದ್ದು, 150 ಜನರ ಮೇಲೆ ಕೇಸ್ ಹಾಕಲಾಗಿದೆ. ಬಂಧಿತರಿಂದ 750 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ವಿದ್ಯಾರ್ಥಿಗಳಿಗೆ ಯಾರು ಡ್ರಗ್ಸ್ ಸರಬರಾಜು ಮಾಡುತ್ತಾರೆ? ಎಲ್ಲಿಂದ ತರುತ್ತಾರೆ? ಎನ್ನುವ ಮಾಹಿತಿಯನ್ನು ಕೂಡ ಕಲೆಹಾಕಿ ಅಂತಹವರನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದ್ದು, ವಿದ್ಯಾರ್ಥಿಗಳು ವ್ಯಸನ ಮುಕ್ತರಾಗುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಎಸ್ಪಿ ಅರಿವು ಮೂಡಿಸುವ ಕೆಲಸ ಮಾಡಿದರು.
ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ: ಅಲೈನ್ಸ್ ಕಾಲೇಜಿನ ಪ್ರಾಂಶುಪಾಲ ಅಭಯ್ ಛಬ್ಬಿ ಮಾತನಾಡಿ, ಡ್ರಗ್ಸ್ ಬಳಕೆ ಒಂದು ಸಾಮಾಜಿಕ ಸಮಸ್ಯೆ. ಇದರಿಂದ ಹೊರಬರಲು ಪೊಲೀಸ್ ಇಲಾಖೆಯ ವಾಕಥಾನ್ಗೆ ಸುತ್ತಮುತ್ತಲ ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು ಕೈಜೋಡಿಸಿವೆ. ಮಾದಕ ವ್ಯಸನದಿಂದ ಆಗುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕುಂದಾನಗರಿ ಸುಂದರಿಗೆ 'ಮಿಸಸ್ ಏಷಿಯಾ ಸೂಪರ್ ಮಾಡಲ್ ಬ್ಯೂಟಿಫುಲ್ ಸ್ಕಿನ್' ಪ್ರಶಸ್ತಿ
ಎಎಸ್ಪಿ ಎಂ.ಎಲ್ ಪುರುಷೋತ್ತಮ್, ನಾಗರಾಜ್, ಡಿವೈಎಸ್ಪಿ ಮೋಹನ್, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಚಂದ್ರಪ್ಪ, ಅಯ್ಯಣ್ಣ ರೆಡ್ಡಿ, ನವೀನ್, ರಾಘವ್ ಗೌಡ, ಶಂಕರ್, ಸಂಜೀವ್ ಮಹಾಜನ್ ಅಲೈನ್ಸ್ ಕಾಲೇಜಿನ ಆಡಳಿತ ಮಂಡಳಿಯ ಸುರೇಖಾ ಶೆಟ್ಟಿ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: ತರಹೇವಾರಿ 'ತೆಂಗಿನ್' ಉತ್ಪನ್ನಗಳು: ಸಾಫ್ಟ್ವೇರ್ ಕೆಲಸ ಬಿಟ್ಟು ಕೃಷಿಯಲ್ಲಿ ಖುಷಿ ಕಂಡ ಟೆಕ್ಕಿ