ಮಹದೇವಪುರ(ಬೆಂಗಳೂರು): ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮುನಿಅಕ್ಕಯ್ಯಮ್ಮ ಹಾಗೂ ಉಪಾಧ್ಯಕ್ಷರಾಗಿ ಅಶೋಕ್ ಆಯ್ಕೆಯಾಗಿದ್ದಾರೆ. ಕರ್ನಾಟಕದಲ್ಲಿ ಪಂಚಾಯಿತಿ ಆರಂಭವಾದ ಮೇಲೆ ಇದೇ ಮೊದಲ ಬಾರಿಗೆ ಮಹದೇವಪುರದ ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರ ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಕಣ್ಣೂರು ಪಂಚಾಯಿತಿಯಲ್ಲಿ ಮೊದಲ ಬಾರಿಗೆ ಬಿಜೆಪಿ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಪೂರ್ಣಪ್ರಮಾಣದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಒಟ್ಟು 31 ಸದಸ್ಯರ ಬಲ ಹೊಂದಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪ್ರಕಟವಾಗಿತ್ತು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದಾಗ ಅಧ್ಯಕ್ಷ ಸ್ಥಾನಕ್ಕೆ ಮುನಿಅಕ್ಕಯ್ಯಮ್ಮ ಮತ್ತು ದೀಪಾ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ್ ಮತ್ತು ನಾರಾಯಣರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಮುನಿಅಕ್ಕಯ್ಯಮ್ಮ ಮತ್ತು ಅಶೋಕ್ ತಲಾ 20 ಮತ ಪಡೆದರು. ಈ ಬಳಿಕ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಚುನಾವಣಾಧಿಕಾರಿ ರಾಜಶೇಖರ್ ಘೋಷಿಸಿದರು.
ಗ್ರಾಪಂ ಉಪಾಧ್ಯಕ್ಷ ಅಶೋಕ್ ಮಾತನಾಡಿ, ಗ್ರಾಮ ಪಂಚಾಯಿತಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಪೂರ್ಣಪ್ರಮಾಣದಲ್ಲಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ ಆಡಳಿತದಲ್ಲಿದ್ದ ಕಣ್ಣೂರು ಪಂಚಾಯಿತಿ ಇದೇ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಬಂದಿದೆ. ಇದು ಒಂದು ಇತಿಹಾಸವಾಗಿದೆ ಎಂದರು. ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಮತ್ತು ಅವರ ಅಭಿವೃದ್ಧಿ ಕೆಲಸಕ್ಕೆ ಜನರು ಮೆಚ್ಚಿ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಪ್ಪ ಸಚಿವ ಅರವಿಂದ ಲಿಂಬಾವಳಿರವರು ಈ ಗ್ರಾಪಂ ಅಭಿವೃದ್ದಿಗೆ ಸಾಕಷ್ಟು ಅನುದಾನ ನೀಡಿದ್ದರು. ಜೊತೆಗೆ ಎಲ್ಲಾ ನಾಯಕರು, ಮುಖಂಡರ ಪರಿಶ್ರಮದಿಂದ ಹೆಚ್ಚು ಸ್ಥಾನ ಪಡೆಯಲು ಸಹಕಾರಿಯಾಗಿದೆ. ಸರ್ಕಾರದ ಅನುದಾನವನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವಲ್ಲಿ ಎಲ್ಲಾ ಸದಸ್ಯರು ಕೈ ಜೋಡಿಸಿ ಉತ್ತಮ ಸೇವೆ ಸಲ್ಲಿಸಲು ಗಮನ ಹರಿಸುತ್ತೇವೆ ಎಂದರು.