ಬೆಂಗಳೂರು/ನವದೆಹಲಿ: ಇಸ್ರೇಲ್-ಹಮಾಸ್ ಉಗ್ರರ ನಡುವೆ ಯುದ್ಧ ಮುಂದುವರಿದಿದೆ. ಇಸ್ರೇಲ್‌ನಿಂದ 212 ಭಾರತೀಯ ಪ್ರಜೆಗಳನ್ನು ಹೊತ್ತ ಚಾರ್ಟರ್ ವಿಮಾನ ದೆಹಲಿ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಲ್ಯಾಂಡ್ ಆಯಿತು. ಇದರಲ್ಲಿ ಐವರು ಕನ್ನಡಿಗರೂ ಇದ್ದು ಬೆಂಗಳೂರು ವಿಮಾನ ನಿಲ್ದಾಣ ಬಂದು ತಲುಪಿದರು.
ತಾಯ್ನಾಡಿಗೆ ಆಗಮಿಸಿದ ಮೊದಲ ಕನ್ನಡಿಗ ಈರಣ್ಣ ಮಾತನಾಡಿ, ''ಇಸ್ರೇಲ್ನಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. ಹಮಾಸ್ ಉಗ್ರರ ದಾಳಿ ಇಸ್ರೇಲ್ ಜನರ ಮೇಲೆ ಪ್ರಭಾವ ಬೀರಿಲ್ಲ. ಗಾಜಾ ಗಡಿ ಭಾಗದಲ್ಲಿ ಮಾತ್ರ ಆತಂಕವಿದೆ. ಇಸ್ರೇಲ್‌ನ ಬೇರೆ ಭಾಗಗಳಲ್ಲಿ ಯಾವುದೇ ತೊಂದರೆ ಇಲ್ಲ. ಜನಜೀವನ ಎಂದಿನಂತಿದೆ. ಎಲ್ಲರೂ ಚೆನ್ನಾಗಿದ್ದಾರೆ'' ಎಂದರು.
''ಊಟಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಸೈರನ್ ಬಂದಾಗ ಮಾತ್ರ ಬಂಕರ್ ಒಳಗೆ ಹೋಗ್ತಿದ್ವಿ. ಪಿಎಚ್ಡಿ ಅಧ್ಯಯನಕ್ಕಾಗಿ ನಾನು ತೆರಳಿದ್ದೆ'' ಎಂದು ಬಿಜಾಪುರ ಮೂಲದವರಾದ ಈರಣ್ಣ ಹೇಳಿದರು.
ಕನ್ನಡಿಗರನ್ನು ಸ್ವಾಗತಿಸಿದ ಟಿ.ಬಿ.ಜಯಚಂದ್ರ: ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ನವದೆಹಲಿಯಲ್ಲಿ ಸುರಕ್ಷಿತವಾಗಿ ವಾಪಸ್ ಆದ ಕನ್ನಡಿಗರನ್ನು ಕರ್ನಾಟಕ ಸರ್ಕಾರದ ಪರವಾಗಿ ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದರು.
ಯುದ್ಧದಲ್ಲಿ ಹಲವು ದೇಶಗಳ ನಾಗರಿಕರು ಸಾವನ್ನಪ್ಪಿದ್ದಾರೆ. ಈ ಮಧ್ಯೆ ಭಾರತ ತನ್ನ ನಾಗರಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರಲು 'ಆಪರೇಷನ್ ಅಜಯ್' ಆರಂಭಿಸಿದೆ. ಇದರ ಭಾಗವಾಗಿ ಇಸ್ರೇಲ್‌ನಿಂದ ಭಾರತೀಯರಿದ್ದ ಮೊದಲ ವಿಮಾನ ಇಂದು ನವದೆಹಲಿ ತಲುಪಿತು. ಈ ವಿಮಾನವು ಗುರುವಾರ, ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಟಿತ್ತು.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ''ಇಸ್ರೇಲ್‌ನಿಂದ ನಮ್ಮ ದೇಶದ ಪ್ರಜೆಗಳನ್ನು ಕರೆತರಲು ಅಗತ್ಯವಿದ್ದರೆ, ವಾಯುಪಡೆ ಬಳಕೆ ಮಾಡಿಕೊಳ್ಳಲಾಗುವುದು. ಪ್ರಸ್ತುತ ಚಾರ್ಟರ್ ಫ್ಲೈಟ್‌ಗಳನ್ನು ಬಳಸಲಾಗುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ: Israel vs Hamas: ಗಾಜಾಪಟ್ಟಿ ಮೇಲೆ 6000 ಬಾಂಬ್ ಎಸೆದ ಇಸ್ರೇಲ್ ವಾಯುಪಡೆ