ಬೆಂಗಳೂರು: ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎಂಬ ಶಾಸನ ರೂಪಿಸಿ ಜಾರಿಗೆ ತರಬೇಕೆಂದು ಆಗ್ರಹಿಸಿ ಇಂದು ಹಲವಾರು ಕನ್ನಡಪರ ಸಂಘಟನೆಗಳು ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಟ್ವಿಟರ್ನಲ್ಲಿ ಕರ್ನಾಟಕ ಜಾಬ್ಸ್ ಫಾರ್ ಕನ್ನಡಿಗಾಸ್ ಎಂಬ ಜಾಗೃತಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದಕ್ಕೆ ಅಂದಿನ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಎಚ್ ಡಿ ಕುಮಾರಸ್ವಾಮಿ ಹಾಗೂ ಇಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಹ ಟ್ವಿಟರ್ನಲ್ಲಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ರು.
ಈಗ ಹೋರಾಟ ಉಗ್ರರೂಪ ಪಡೆದುಕೊಂಡಿದ್ದು, ಹಲವಾರು ಕನ್ನಡಪರ ಸಂಘಟನೆಗಳು ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಮೀಸಲಾಗಬೇಕು ಎಂದು ಆಗ್ರಹಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ. ಅಲ್ಲದೆ ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಬೇಕು ಎಂಬುದಕ್ಕೆ ಸಹಿಯನ್ನು ಸಂಗ್ರಹಿಸಿ ಚಳುವಳಿ ಆರಂಭಿಸಿದ್ದಾರೆ. ಇನ್ನು ಈ ಹೋರಾಟಕ್ಕೆ ಈಗಾಗಲೇ ಹಲವಾರು ಪ್ರಗತಿಪರ ಸಂಘಟನೆಗಳು, ಸಾಹಿತಿಗಳು ಮತ್ತು ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿದ್ದಾರೆ. ನಟ ಶಿವರಾಜ್ ಕುಮಾರ್, ನಿರ್ದೇಶಕ ನಟ ಉಪೇಂದ್ರ, ನಟ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ದೇಶಕ ಚಂದ್ರಶೇಖರ್, ರಾಷ್ಟ್ರ ಪ್ರಶಸ್ತಿ ವಿಜೇತರಾದ ಸಂಚಾರಿ ವಿಜಯ್ ಅವರು ಸತ್ಯಗ್ರಹ ಕುಳಿತಿರುವ ಸ್ಥಳಕ್ಕೆ ಬಂದು ಹೋರಾಟಗಾರರಿಗೆ ಸಾಥ್ ನೀಡಲಿದ್ದಾರೆ.
ಇನ್ನು ಕರ್ನಾಟಕದಲ್ಲಿ ಇರುವಂತಹ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕು. ನಾವು ಯಾರ ಮುಂದೆಯೂ ಭಿಕ್ಷೆ ಬೇಡಲ್ಲ. ಅಲ್ಲದೆ ಸರ್ಕಾರದವರೇ ಬಂದು ನಮ್ಮ ಅಹವಾಲನ್ನು ಸ್ವೀಕರಿಸಬೇಕು. ನಾವು ಯಾವುದೇ ಕಾರಣಕ್ಕೂ ಸರ್ಕಾರದ ಬಳಿ ಹೋಗಿ ನಮ್ಮ ಬೇಡಿಕೆಯನ್ನು ಇಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರರಾದ ಹರೀಶ್ ತಿಳಿಸಿದರು.
ಅಲ್ಲದೆ ಇದು ಸರ್ಕಾರದ ಕರ್ತವ್ಯ ಹಾಗಾಗಿ ಸರ್ಕಾರದವರು ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅವರಾಗಿಯೇ ಬಂದು ನಮ್ಮ ಅಹವಾಲನ್ನು ಸ್ವೀಕರಿಸದಿದ್ದರೆ, ನಮ್ಮ ಯುವಸಮೂಹ ಮುಂದಿನದಿನಗಳಲ್ಲಿ ದಂಗೆ ಹೇಳಬೇಕಾಗುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಖಾಸಗಿ ವಲಯವು ಸರ್ಕಾರಿ ವಲಯ-2 ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು ನೀಡಬೇಕು. ಕರ್ನಾಟಕದಲ್ಲಿ ಕನ್ನಡಿಗರು ಉದ್ಯೋಗಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವರ್ಷದಿಂದ ನಾವು ಸಾಮಾಜಿಕ ಜಾಲತಾಣಗಳಲ್ಲಿ ಈ ಹೋರಾಟವನ್ನು ಮಾಡುತ್ತಿದ್ದೇವೆ.
ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಎಚ್ ಡಿ ಕುಮಾರಸ್ವಾಮಿ ಈಗಿನ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರ ಮೂಲಕ ನಮ್ಮ ಕಣ್ಣೊರೆಸುವ ಕೆಲಸವನ್ನು ಮಾಡುತ್ತಿದ್ದಾರೆ. ನಮಗೆ ನಿಮ್ಮ ಆಶ್ವಾಸನೆ ಬೇಡ. ಕರ್ನಾಟಕದಲ್ಲಿರುವ ಉದ್ಯೋಗ ಕನ್ನಡಿಗರಿಗೆ ಸಿಗಬೇಕು ಇದಕ್ಕೆ ಕಾನೂನನ್ನು ಕಾರ್ಯಗತಗೊಳಿಸಬೇಕು ಎಂದು ಕನ್ನಡಪರ ಹೋರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.