ಬರ್ಲಿನ್ (ಜರ್ಮನಿ ): ಜರ್ಮನಿಯ ಬ್ರೌನ್ಸ್ಚವೆಯ್ಗ್ ಮತ್ತು ವಲ್ಫ್ಸ್ಬುರ್ಗ್ ನಗರಗಳಲ್ಲಿ ವಾಸಿಸುವ ಕನ್ನಡಿಗರು ಇತ್ತೀಚಿಗೆ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು. ಕನ್ನಡಿಗರೇ ಸೇರಿ ಪ್ರಾರಂಭಿಸಿದ 'ಬ್ರಾ-ವೊ ಕನ್ನಡ ಬಳಗ' ಸ್ಥಾಪನೆಯಾಗಿ ಮೂರು ವರುಷ ಪೂರೈಸಿದ ಹಿನ್ನೆಲೆ ಮೂರನೇ ವಾರ್ಷಿಕೋತ್ಸವದ ನಿಮಿತ್ತ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಈ ಬಳಗವು ಜರ್ಮನಿಯ ಲೋಯರ್ ಸ್ಯಾಕ್ಸನ್ ರಾಜ್ಯದ ಮೊದಲನೆಯ ಕನ್ನಡ ಬಳಗವಾಗಿದೆ. ಕನ್ನಡ ಬಳಗವು ಕನ್ನಡ ರಾಜ್ಯೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ದೀಪ ಬೆಳಗಿಸಿ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಘದ ಮುಖಂಡ ಶಿವರಾಯ್ ಜಾಣ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಶಕ್ತಿಯುತವಾಗಿ ಮುನ್ನಡೆಸಬೇಕು ಮತ್ತು ಮತ್ತಷ್ಟು ಸದಸ್ಯರನ್ನು ನೇಮಕ ಮಾಡಿಕೊಂಡು ಮುಂದಿನ ವರ್ಷ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ, ಭರತನಾಟ್ಯ, ಜಾನಪದ ನೃತ್ಯ, ಗೀತ ಗಾಯನ, ರಸಪ್ರಶ್ನೆ, ಮಕ್ಕಳ ವೇಷಭೂಷಣ ಪ್ರಮುಖ ಆಕರ್ಷಣೆಗಳಾಗಿದ್ದವು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 100 ಜನ ಭಾಗವಹಿಸಿದ್ದರು. 30ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ನೀಡಿ ಎಲ್ಲರನ್ನೂ ರಂಜಿಸಿದರು.
ಶಿವರಾಯ್ , ಕಿರಣ್ ರಶ್ಮಿ, ಆನಂದ್, ಪೂಜಾ, ಶ್ರೀಧರ್, ಐಶ್ವರ್ಯ, ಶ್ರೇಯಸ್, ನಮಿತಾ, ರಂಜಿತ್, ದೀಪಾ, ಪವನ್, ಪ್ರಭಾತ್, ಅವಿನಾಶ್ ಹಾಗೂ ಗುರುಚರಣ್ ಮುಂತಾದವರು ಜರ್ಮನಿಯಲ್ಲಿ ಕನ್ನಡಮ್ಮನ ಉತ್ಸವಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ :ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ವಿಶ್ವ ಕನ್ನಡ ಹಬ್ಬ