ಬೆಂಗಳೂರು: ಭಾಷೆ ವಿಷಯದಲ್ಲಿ ಯಾವುದೇ ರಾಜೀ ಇಲ್ಲ. ಆಡಳಿತ ಹಾಗೂ ವ್ಯವಹಾರದಲ್ಲಿ ಕನ್ನಡವನ್ನೇ ಕಡ್ಡಾಯವಾಗಿ ಬಳಸಬೇಕು. ರಾಜ್ಯದಲ್ಲಿರುವವರೆಲ್ಲ ಕನ್ನಡಿಗರೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಧ್ವಜಾರೋಹಣ ಮಾಡಿ, ಶಾಂತಿಯ ಸಂಕೇತ ಪಾರಿವಾಳ ಮತ್ತು ಹಳದಿ ಕೆಂಪು ಬಣ್ಣದ ಬಲೂನ್ಗಳನ್ನ ಹಾರಿ ಬಿಡುವುದರ ಮೂಲಕವೇ ಚಾಲನೆ ನೀಡಿದರು.
ಬಳಿಕ ಅಧ್ಯಕ್ಷೀಯ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಲು ಸರ್ಕಾರ ಪಣತೊಟ್ಟಿದೆ. ಅಭಿವೃದ್ಧಿಗೆ ತಜ್ಞರ ಮಾರ್ಗದರ್ಶನ ಪಡೆದು ಸರ್ಕಾರ ಮುಂದೆ ಹೋಗುತ್ತಿದೆ. ಭಾಷೆ ವಿಷಯದಲ್ಲಿ ಯಾವುದೇ ರಾಜೀ ಇಲ್ಲ. ನಾಡು - ನುಡಿ ಜಲದ ವಿಷಯದಲ್ಲಿ ನಮಗೆ ಅಭಿಮಾನವಿರಬೇಕು. ಇವೆಲ್ಲ ಕೇವಲ ಆಚರಣೆಗೆ ಸೀಮಿತವಾದರೆ ಜೀವನವೇ ವ್ಯರ್ಥ ಎಂದರು.
ಹೊರಭಾಷೆ, ಹೊರ ರಾಜ್ಯಗಳಿಂದ ಬಂದಿರುವ ಜನ ತಮ್ಮ ತನವನ್ನು ಉಳಿಸಿಕೊಳ್ಳುವ ಜತೆಗೆ ಕನ್ನಡ ಭಾಷೆ ಹಾಗೂ ರಾಜ್ಯವನ್ನು ಗೌರವಿಸಿ ಹೊಂದಿಕೊಂಡು ಬಾಳಬೇಕು. ಕರ್ನಾಟಕದಲ್ಲಿ ವಾಸ ಮಾಡುವವರೆಲ್ಲರೂ ಕನ್ನಡಿಗರೇ. ಕನ್ನಡ ಭಾಷೆ ಉಳಿಸಬೇಕಾದರೆ ಇಂಗ್ಲೀಷ್ ವ್ಯಾಮೋಹದಿಂದ ಹೊರಬರಬೇಕು. ಆಡಳಿತ ಮತ್ತು ವ್ಯವಹಾರದಲ್ಲೂ ಕನ್ನಡ ಕಡ್ಡಾಯವಾಗಿ ಬಳಸಬೇಕು. ಹೆಚ್ಚು ಹೆಚ್ಚು ಕನ್ನಡ ಪುಸ್ತಕಗಳನ್ನು ಓದಬೇಕು. ಕನ್ನಡ ಪತ್ರಿಕೆಗಳನ್ನು ಪ್ರೋತ್ಸಾಹಿಸಬೇಕು. ಹೆತ್ತತಾಯಿ ಎಷ್ಟು ಮುಖ್ಯವೋ ತಾಯಿ ಭಾಷೆಯೂ ಅಷ್ಟೇ ಮುಖ್ಯ ಅಂತ ಹೆಮ್ಮೆಯ ಮಾತುಗಳನ್ನ ಆಡಿದರು.
ಇದಕ್ಕೂ ಮುನ್ನ ಮಾತಾನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವ ಸುರೇಶ್ ಕುಮಾರ್, ಇಡೀ ನಾಡು ಕನ್ನಡದ ಸಂಭ್ರಮದಲ್ಲಿದೆ. ಕರ್ನಾಟಕ ಒಂದು ರಾಜ್ಯ ಎಂಬ ಗುರುತನ್ನು ಪಡೆದು 64 ವರ್ಷ ಕಳೆದಿದೆ. ಜಗತ್ತಿನ ಅತ್ಯುತ್ತಮ ಸಾಹಿತ್ಯ ಭಂಡಾರದಲ್ಲಿ ಕನ್ನಡವೂ ಒಂದು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ-ಮಾನ ಸಿಕ್ಕಿದೆ ಅಂತ ತಿಳಿಸಿದರು.
ರಾಷ್ಟ್ರಧ್ವಜ - ನಾಡಧ್ವಜ ಹಾರಿಸಲಾಗಿದೆ. ರಾಷ್ಡ್ರಗೀತೆ-ನಾಡಗೀತೆ ಹಾಡಲಾಗಿದೆ. ಇದರ ಬಗ್ಗೆ ತಪ್ಪು ಗ್ರಹಿಕೆ ಉಂಟಾಗಿದೆ. ಕೇವಲ ರಾಷ್ಟ್ರಧ್ವಜ ಹಾರಿಸಬೇಕೆಂದು ನಮ್ಮ ಸರ್ಕಾರ ಸೂಚನೆ ನೀಡಿದೆ ಎಂದು ಅಪಪ್ರಚಾರ ಮಾಡಲಾಗಿದೆ. ಹಿಂದಿನಿಂದ ಯಾವ ಸಂಪ್ರದಾಯ ಪಾಲನೆ ಮಾಡಲಾಗುತ್ತಿತ್ತೋ ಈಗಲೂ ಅದೇ ಸಂಪ್ರದಾಯ ಪಾಲಿಸಿದ್ದೇವೆ. ರಾಷ್ಟ್ರಧ್ವಜ-ನಾಡಧ್ವಜ ಎರಡನ್ನೂ ಹಾರಿಸುವ ಮೂಲಕ ರಾಷ್ಟ್ರ ಹಾಗೂ ರಾಜ್ಯ ಎರಡನ್ನೂ ಗೌರವಿಸಲಾಗಿದೆ ಅಂತ ಹೇಳಿದರು.
ಮೇಯರ್ ಗೌತಮ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಮೋಡಿ ಮಾಡಿದ ಚಿಣ್ಣರ ಪಂಥ ಸಂಚಲನ:
ಶಾಲಾ ಮಕ್ಕಳ ಪಥ ಸಂಚಲನ ಎಲ್ಲರನ್ನೂ ಆಕರ್ಷಿಸಿತು. ಸುಮಾರು 15 ಶಾಲೆಗಳ 776 ಮಕ್ಕಳು ಬ್ಯಾಂಡ್ ಸೆಟ್, ಕನ್ನಡ ಬಾವುಟ, ತ್ರಿವರ್ಣ ಧ್ವಜ ಹಿಡಿದು ಪಥ ಸಂಚಲನ ಮಾಡಿದ್ದು, ಮೋಡಿ ಮಾಡಿತು.
ಕನ್ನಡದ ಕಂಪು ಸಾರಿದ ರಾಜ್ಯೋತ್ಸವ ನೃತ್ಯ ರೂಪಕ:
8ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮವನ್ನ ಮಕ್ಕಳು ಪ್ರಸ್ತುತ ಪಡಿಸಿದರು. ಎಳೆಯೋಣ ಬಾರಾ, ಕನ್ನಡದ ತೇರ, ಅರಳುವ ಪುಷ್ಪಗಳು, ವೀರಮದಕರಿನಾಯಕ ನೃತ್ಯ ರೂಪಕ ಮಾಡಿದರು.