ದೊಡ್ಡಬಳ್ಳಾಪುರ : ಕೇಂದ್ರ ಬಿಜೆಪಿ ಸರ್ಕಾರ ಅನಗತ್ಯವಾಗಿ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುವುದರ ಮೂಲಕ ಪ್ರಾದೇಶಿಕ ಭಾಷೆಗಳಿಗೆ ಧಕ್ಕೆ ತರುವ ಕೆಲಸಕ್ಕೆ ಮುಂದಾಗಿದೆ ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ) ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಹೇಳಿದರು.
ನಗರದ ತಾಲೂಕು ಅಂಚೆ ಕಚೇರಿ ಮುಂದೆ ಕರವೇ ವತಿಯಿಂದ ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯಗಳ ಮೇಲೆ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಬಳಿಕ ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ಕೇಂದ್ರ ಸರ್ಕಾರವು ವಿನಾಕಾರಣ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಕಡ್ಡಾಯ ಮಾಡುವುದು ಸರಿಯಲ್ಲ. ಎಲ್ಲಾ ರಾಜ್ಯಗಳ ಒಕ್ಕೂಟವೇ ಭಾರತವಾಗಿರುವಾಗ ಹಿಂದಿಯನ್ನು ವೈಭವಿಕರಿಸುವುದು ತಪ್ಪು ಕಲ್ಪನೆಯಾಗಿದೆ. ಆಯಾ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಮಾನ್ಯತೆ ನೀಡಬೇಕು. ಕನ್ನಡ ಭಾಷೆಗೂ ಹಿಂದಿಯಷ್ಟೇ ಪ್ರಾಮುಖ್ಯತೆ ನೀಡುವಂತೆ ಒತ್ತಾಯಿಸಿದರು.
ಭಾಷಾವಾರು ವಿಂಗಡೆಣೆಯಾಗಿರುವ ರಾಜ್ಯಗಳಲ್ಲಿ ರಾಷ್ಟ್ರ ಭಾಷೆಯನ್ನಾಗಿ ಮಾನ್ಯತೆ ಮಾಡುವುದಾದರೆ ಸ್ಥಳೀಯ ಭಾಷೆಯನ್ನೇ ಮಾಡಬೇಕಾಗುತ್ತದೆ. ಆ ಕಾರಣ ಒಂದು ದೇಶಕ್ಕೆ ಒಂದು ಭಾಷೆ ಮಾಡಲು ಸಾಧ್ಯವಾಗುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿಯಿಂದ ರಾಷ್ಟ್ರದ ಉದ್ಧಾರ ಎಂದಿದ್ದಾರೆ. ಅದು ಹೇಗೆ ಸಾಧ್ಯ. ಭಾರತ ದೇಶವು ಒಕ್ಕೂಟ ವ್ಯವಸ್ಥೆ ಹೊಂದಿದೆ. ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ. ಬ್ಯಾಂಕಿಂಗ್ ಹಾಗೂ ಇನ್ನಿತರ ನೇಮಕಾತಿಯಲ್ಲೂ ಹಿಂದಿ ಹೇರಿಕೆ ಮಾಡಲಾಗುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಪ್ರಾದೇಶಿಕ ಭಾಷೆಯಲ್ಲಿ ಬ್ಯಾಂಕ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.