ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳ ಪರಿಸ್ಥಿತಿಗೆ ಬೇಸತ್ತಿರುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ಗುಂಡಿಗಳಿಗೆ ಪೂಜೆ ವಿಭಿನ್ನ ಹಾಗೂ ವಿಶೇಷ ಪೂಜೆ ಮೂಲಕ ಪ್ರತಿಭಟನೆ ಮಾಡಿದರು.
ಸಿಎಂ, ಮೇಯರ್ ಮತ್ತು ಕಮೀಷನರ್ ಫೋಟೊಗಳನ್ನು ರಸ್ತೆಯ ಗುಂಡಿಗಳಲ್ಲಿಟ್ಟು ವಿಶೇಷ ಪೂಜೆ, ಮಾಡುವ ಮೂಲಕ ಸಿಎಂ ಬಿ ಎಸ್ ಯಡಿಯೂರಪ್ಪ, ಮೇಯರ್ ಗೌತಮ್ ಕುಮಾರ್, ಕಮೀಷನರ್ ಅನಿಲ್ ಕುಮಾರ್ ಅವರಿಗೆ ನೋಡಿ ಸ್ವಾಮಿ, ನಮ್ಮ ಪರಿಸ್ಥಿತಿ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ. ಹೂವಿನಹಾರ ಹಾಕಿ, ತೆಂಗಿನಕಾಯಿ ಒಡೆದು ಪೂಜೆ ಮಾಡಿ ಗುಂಡಿಯಲ್ಲೇ ಪಂಚಾಮೃತ ಅಭಿಷೇಕ ಮಾಡುವ ಮೂಲಕ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನೇರವಾಗಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ್ರು ಎಚ್ಚೆತ್ತುಕೊಳ್ಳದ ಬಿಬಿಎಂಪಿ
ಮಹಾನಗರದ ರಸ್ತೆಗಳು ಬಿಬಿಎಂಪಿಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿವೆ. ಅದರಲ್ಲೂ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ಸುತ್ತಮುತ್ತ ಸಂಚರಿಸುವ ವಾಹನ ಸವಾರರು ಗಾಡಿ ಓಡಿಸಲು ಬೆಚ್ಚಿಬೀಳುತ್ತಾರೆ. ಅಲ್ಲದೆ ನಾಯಂಡಳ್ಳಿ ರಸ್ತೆಯ ಗುಂಡಿಗಳ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರೂ ಕೂಡ ಬಿಬಿಎಂಪಿ ಮಾತ್ರ ಇನ್ನು ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.