ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡದ ನಾಮಫಲಕ ಕಡ್ಡಾಯವಾಗಿ ಹಾಕಬೇಕು ಎಂದು ಬಿಬಿಎಂಪಿ ಗಡುವು ನೀಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯೊಂದಿಗೆ ಮಲ್ಲೇಶ್ವರ ಐಪಿಪಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಫೆ. 28ರೊಳಗಾಗಿ ನಗರದಲ್ಲಿ ಶೇ.60 ರಷ್ಟು ಕನ್ನಡ ಭಾಷೆಯ ನಾಮಫಲಕ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಮಾಲ್ ಸೇರಿದಂತೆ ಇನ್ನಿತರ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಎಲ್ಲಾ ವಲಯ ಆಯುಕ್ತರ ಜತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.
ಮುಖ್ಯ-ಉಪಮುಖ್ಯ ರಸ್ತೆ ಎಲ್ಲ ಮಳಿಗೆಗಳಿಗೆ ನಿರ್ದೇಶನ ನಗರದಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು 1400 ಕಿ.ಮೀ ನಷ್ಟಿವೆ. ಈ ರಸ್ತೆೆಗಳಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೆ ಮಾಡಿಸಲಾಗುವುದು. ಸರ್ವೇಯ ನಂತರ ಶೇ. 60 ರಷ್ಟು ಕನ್ನಡ ಭಾಷೆ ಬಳಸದ ಮಳಿಗೆಗಳಿಗೆ ನೋಟಿಸ್ ನೀಡಲಾಗುವುದು. ನೋಟಿಸ್ ನಿಡಿದ ಬಳಿಕ ಫೆಬ್ರವರಿ 28 ರವರೆಗೆ ಸಮಯಾವಕಾಶ ನೀಡಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿ ಅನುಷ್ಠಾನಗೊಳಿಸಿ ಆಯಾ ವಲಯ ಆಯುಕ್ತರಿಗೆ ಅನುಪಾಲನೆ ಸಲ್ಲಿಸಬೇಕು ಎಂದು ಸೂಚಿಸಲಾಗುವುದು. ಅಂಗಡಿ-ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಹಾಕದೇ ಇರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸರಕಾರದ ಆದೇಶ ಹಾಗೂ ಪಾಲಿಕೆ ಸುತ್ತೋಲೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
ಫೆ.28ರೊಳಗೆ ಕನ್ನಡ ಕಡ್ಡಾಯವಾಗದಿದ್ದರೆ ಕ್ರಮ: ಪಾಲಿಕೆ ವ್ಯಾಪ್ತಿಯಲ್ಲಿ ಅಂಗಡಿ-ಮುಂಗಟ್ಟುಗಳು ಹಾಗೂ ಮಳಿಗೆಗಳಲ್ಲಿ ಕನ್ನಡ ನಾಮ ಫಲಕಗಳನ್ನು ಫೆ.28ರ ಒಳಗಾಗಿ ಅಳವಡಿಸದೇ ಇದ್ದರೆ ಅಂತಹ ಅಂಗಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಅಮಾನತಿನಲ್ಲಿಟ್ಟ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಇದೇ ವಿಷಯವಾಗಿ ಮಾಲ್‌ಗಳೊಂದಿಗೆ ಸಮಾಲೋಚನೆ ನಡೆಸಿ ಮಾಲ್‌ಗಳಲ್ಲಿರುವ ಎಲ್ಲಾ ಮಳಿಗೆಗಳಲ್ಲಿ 15-20 ದಿನಗಳೊಳಗಾಗಿ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಪಾಲಿಕೆ ಉಪ ಆಯುಕ್ತ ಮಂಜುನಾಥ ಸ್ವಾಮಿ, ಮುಖ್ಯ ಅಭಿಯಂತರ ಪ್ರವೀಣ್ ಲಿಂಗಯ್ಯ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ್ ಗೌಡ, ಕನ್ನಡ ಸಂಘದ ಪ್ರತಿನಿಧಿಗಳು, ಇತರ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ; ಬೆಲ್ಲದ್ಗೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಸ್ಥಾನ