ಬೆಂಗಳೂರು : ಆಡಳಿತದಲ್ಲಿ ಕನ್ನಡ ಅನುಷ್ಠಾನ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಸಭೆಗೆ ಯಾವುದೇ ಮುನ್ಸೂಚನೆ ನೀಡದೆ ಗೈರು ಹಾಜರಾದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಈ ಕುರಿತಂತೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ.
ಈ ಕುರಿತು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಅವರು ಜೂನ್ 26ರಂದು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕನ್ನಡ ಭಾಷೆಯನ್ನು ಆಡಳಿತದಲ್ಲಿ ಸಮರ್ಥವಾಗಿ ಅನುಷ್ಠಾನಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಶಾಸನಾತ್ಮಕವಾಗಿ ರಚಿಸಲಾಗಿದೆ. ಹಾಗೆಯೇ ಕನ್ನಡ ಭಾಷೆ ಅನುಷ್ಠಾನಗೊಳಿಸುವಲ್ಲಿ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ಸೆಕ್ಷನ್ 19ರ ಅಡಿ ಅಧಿಕಾರವನ್ನೂ ಕೊಡಲಾಗಿದೆ.
ಅದರಂತೆ ಪ್ರಾಧಿಕಾರವು ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುತ್ತಿರುವ ಕುರಿತು ಪರಿಶೀಲಿಸಿಲು ಮತ್ತು ಚರ್ಚಿಸಲು ಇಲಾಖಾವಾರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದೆ. ತಮಗೂ ಜೂನ್ 20 ರಂದು ಆನ್ಲೈನ್ ಸಭೆಗೆ ಹಾಜರಾಗುವಂತೆ ಕೋರಲಾಗಿತ್ತು. ಪರಿಶೀಲನಾ ಸಭೆಗೆ ಇಲಾಖೆಯ ಎಲ್ಲ ಜವಬ್ದಾರಿಯುತ ಅಧಿಕಾರಿಗಳೂ ಹಾಜರಾಗಬೇಕಿತ್ತು. ಆದರೆ ಸಭೆಗೆ ನೋಡಲ್ ಅಧಿಕಾರಿ ಹೊರತುಪಡಿಸಿ ಯಾರೊಬ್ಬರೂ ಹಾಜರಿರಲಿಲ್ಲ. ಯಾವುದೇ ಮುನ್ಸೂಚನೆ ನೀಡದೆ ತಾವು ಸಭೆಗೆ ಗೈರು ಹಾಜರಾಗಿದ್ದೀರಿ.
ಪ್ರಾಧಿಕಾರ ನಡೆಸಿದ ಯಾವುದೇ ಇಲಾಖೆಯ ಪರಿಶೀಲನೆ ಸಂದರ್ಭದಲ್ಲಿಯೂ ಇಂತಹ ಬೇಜವಾಬ್ದಾರಿ ಪ್ರದರ್ಶಿಸಿರಲಿಲ್ಲ. ರಾಜ್ಯದ ಋಣದಲ್ಲಿದ್ದೂ ರಾಜ್ಯ ಭಾಷೆಯ ಕುರಿತು ನೀವು ಹೊಂದಿರುವ ದಾರ್ಷ್ಯವನ್ನು ಪ್ರಾಧಿಕಾರ ತೀವ್ರವಾಗಿ ಖಂಡಿಸುತ್ತದೆ. ಸೌಜನ್ಯಕ್ಕೂ ಸಭೆಗೆ ಹಾಜರಾಗದಿರುವುದರ ಬಗ್ಗೆ ಮಾಹಿತಿ ನೀಡದ ನಿಮ್ಮ ನಡವಳಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹುದೇ ನಡವಳಿಕೆ ಪುನರಾವರ್ತಿಸಿದರೆ ನಿಮ್ಮ ವಿರುದ್ಧ ಅಗತ್ಯ ಕ್ರಮ ಜರುಗಿಸಲು ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗೆ ಕೋರುವುದು ಅನಿವಾರ್ಯವಾಗುತ್ತದೆ. ಹೀಗಾಗಿ ತಾವು ಸ್ಪಷ್ಟೀಕರಣ ನೀಡಬೇಕು ಎಂದು ನಾಗಾಭರಣ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.