ಬೆಂಗಳೂರು : ನಟ ನಾಗಭೂಷಣ್ ಅವರ ಕಾರು ಅಪಘಾತವಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಕುರಿತು ದಕ್ಷಿಣ ವಿಭಾಗದ (ಸಂಚಾರಿ) ಡಿಸಿಪಿ ಶಿವಪ್ರಕಾಶ್ ದೇವರಾಜ್ ಪ್ರತಿಕ್ರಿಯಿಸಿದ್ದಾರೆ.
ಠಾಣಾ ಜಾಮೀನಿನ ಮೇಲೆ ಬಿಡುಗಡೆ: ''ನಿನ್ನೆ ರಾತ್ರಿ 9.30ರಲ್ಲಿ ಕೆ.ಎಸ್.ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಪಾದಾಚಾರಿಗೆ ಕಾರು ಡಿಕ್ಕಿಯಾಗಿದೆ. ಪ್ರೇಮಾ ಎಂಬವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಕೃಷ್ಣ ಎಂಬವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಬಳಿಕ ಪಕ್ಕದಲ್ಲಿ ಇದ್ದ ವಿದ್ಯುತ್ ಕಂಬಕ್ಕೂ ಡಿಕ್ಕಿಯಾಗಿದೆ. ಚಾಲಕ ನಾಗಭೂಷಣ್ ಅವರನ್ನು ವಶಕ್ಕೆ ಪಡೆದುಕೊಂಡು, ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕಾರು ಚಾಲಕನ ಅತಿ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿರುವುದು ಕಂಡುಬಂದಿದೆ. ಚಾಲಕ ಮದ್ಯಪಾನ ಮಾಡಿರುವ ಬಗ್ಗೆ ತಿಳಿಯಲು ವೈದ್ಯಕೀಯ ಪರೀಕ್ಷೆಗೂ ಕಳುಹಿಸಲಾಗಿದೆ. ಮದ್ಯಪಾನ ಮಾಡಿರುವುದು ದೃಢಪಟ್ಟರೆ ಪ್ರಕರಣದಲ್ಲಿ ಸೆಕ್ಷನ್ಸ್ ಬದಲಾಗಲಿದೆ'' ಎಂದರು.
ಕಾರು ಅಪಘಾತ: ನಾಗಭೂಷಣ್ ಕಾರು ಅಪಘಾತ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ ಕೋಣನಕುಂಟೆ ಕ್ರಾಸ್ ಅಪಘಾತ ನಡೆದಿದೆ. ನಟ ತನ್ನ ಸ್ನೇಹಿತರನ್ನು ಭೇಟಿಯಾಗಿ ಜೆ.ಪಿ.ನಗರದ ತಮ್ಮ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಫುಟ್‌ಪಾತ್ ಮೇಲೆ ವಾಕಿಂಗ್ ಮಾಡುತ್ತಿದ್ದ ದಂಪತಿಗೆ ಕಾರು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದಲ್ಲಿ ಪ್ರೇಮ (48) ಎಂಬವರು ಆಸ್ಪತ್ರೆಗೆ ದಾಖಲಿಸುವ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತರ ಪತಿ ಕೃಷ್ಣ ಅವರಿಗೆ ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಗಭೂಷಣ್ ವಿರುದ್ಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತರ ಪುತ್ರ ಪಾರ್ಥ ದೂರು ದಾಖಲಿಸಿದ್ದು, ಪೊಲೀಸರು ನಟನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ : ನಟ ನಾಗಭೂಷಣ್ ಕಾರು ಅಪಘಾತ: ಮಹಿಳೆ ಸಾವು, ಪತಿ ಸ್ಥಿತಿ ಗಂಭೀರ - ಸ್ಯಾಂಡಲ್‌ವುಡ್ ಸ್ಟಾರ್ ಪೊಲೀಸ್ ವಶಕ್ಕೆ