ಬೆಂಗಳೂರು: ಕುಲ, ಕುಲ ಎಂದು ಹೊಡೆದಾಡದಿರಯ್ಯ, ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎಂಬ ಅಮೂಲ್ಯ ಸಂದೇಶವನ್ನು ಕನಕದಾಸರು ನೀಡಿದ್ದು, ಜಗತ್ತಿನ ಮಾನವ ಜಾನಂಗ ಈ ಎರಡು ಸಾಲುಗಳಿಂದ ಕಲಿಯಬೇಕಾದದ್ದು ಸಾಕಷ್ಠಿದೆ ಎನ್ನುವ ಮೂಲಕ ಕನಕದಾಸರನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಮರಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನಕದಾಸರ ಜಯಂತಿ ಮತ್ತು ಕನಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನಕದಾಸರ ಸಂದೇಶಗಳನ್ನು ಪುನರುಚ್ಛರಿಸಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕನಕದಾಸರ ಒಂದೊಂದು ಮಾತುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಹೇಳಿದ್ದನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಇಂತಹ ಜಯಂತಿಗಳಿಗೆ ಸಾರ್ಥಕತೆ ಬರುತ್ತದೆ. ಮನುಷ್ಯನ ನಶ್ವರವಾದ ಬದುಕಿನಲ್ಲಿ ಕುಲ, ಜಾತಿ ಎಂದು ಬಡಿದಾಡೋದು ಬಿಡಿ. ಇಂತಹ ಜಯಂತಿಗಳ ಮೂಲಕ ಸಾವಿರಾರು ವರ್ಷಗಳ ಕಾಲ ನೆನಪಿಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಜಯಂತಿಗಳನ್ನ ಆಚರಿಸಲಾಗುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ಮಾತನಾಡಿ, ಜಯಂತಿಗಳು ರಾಜಕಾರಣಕ್ಕೆ ಬಳಕೆಯಾಗುತ್ತಿದೆ. ಆದರೆ ಜಾತಿಯ ಕಾರಣಕ್ಕೆ ಜಯಂತಿಗಳು ಬಳಕೆಯಾಗದೆ ಸಂತರ ಬದುಕಿನ ಕಾರಣಕ್ಕೆ ಆಗಬೇಕು. ಸಂತ ಶ್ರೇಷ್ಠರು ಆರಂಭಿಸಿದ, ಭಕ್ತಿ ಚಳವಳಿ ಜನರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಉಳಿಸಿತು. 27 ಮಹನೀಯರ ಜಯಂತಿಯನ್ನು ಇಲಾಖೆಯ ವತಿಯಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ಈ ವೇಳೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಯಡಿಯೂರಪ್ಪ ಸಿಎಂ ಆಗೋಕು ಮುನ್ನ ಕೇವಲ ಮೂರು ಜಯಂತಿಗಳನ್ನ ಮಾತ್ರ ಆಚರಿಸಲಾಗುತ್ತಿತ್ತು. ಯಡಿಯೂರಪ್ಪನವರು ಸಿಎಂ ಆದ ನಂತರ 21 ಜಯಂತಿಗಳ ಆಚರಿಸೋದಕ್ಕೆ ಶುರು ಮಾಡಿದ್ರು. ಜಯಂತಿಗಳು ಒಂದು ದಿನಕ್ಕೆ, ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಆಗಬಾರದು ಎಂದರು.
ಕಾಗಿನೆಲೆ ಸಂಸ್ಥಾನ, ತಿಂತಿಣಿ ಬ್ರಿಡ್ಜ್ ಶಾಖಾಮಠದ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ, ಬಿಎಸ್ವೈ ಧೈರ್ಯ ಮಾಡಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಬೇರೆ ಸಿಎಂಗಳಾಗಿದ್ರೆ ನೀತಿ ಸಂಹಿತೆ ನೆಪದಲ್ಲಿ ಕಾರ್ಯಕ್ರಮಕ್ಕೆ ಬರದೇ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ರು. ಆದ್ರೆ ನಾನೇ ಶುರು ಮಾಡಿದೆ ಎಂದು ಇವತ್ತಿನ ಕಾರ್ಯಕ್ರಮಕ್ಕೆ ಬಿಎಸ್ವೈ ಬಂದಿದ್ದಾರೆ. ಕಾನೂನುಗಳು ಕಾಲಾಕಾಲಕ್ಕೆ ಬದಲಾಗುತ್ತದೆ. ಮಂತ್ರಿಗಳು, ಮುಖ್ಯಮಂತ್ರಿಗಳು ಬದಲಾದಾಗ ಕಾನೂನುಗಳು ಬದಲಾಗುತ್ತವೆ. ಆದರೆ ಮಹಾನೀಯರ ಕಾನೂನುಗಳು ಬದಲಾಗುವುದಿಲ್ಲ. ಕನಕದಾಸರ ಆಶಯಗಳನ್ನು ಈಡೇಸುವಂತ ಕೆಲಸಗಳನ್ನು ಸರ್ಕಾರ ಮಾಡಬೇಕು. ಸರ್ಕಾರಿ ಕಚೇರಿಗಳಲ್ಲಿ ನೀಚತನ ಹೆಚ್ಚಾಗಿದೆ. ಪಾರದರ್ಶಕತೆ ಇಲ್ಲದಂತಾಗಿದೆ. ಹೀಗಾಗಿ ಸರ್ಕಾರಕ್ಕೆ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಅವರ ಗುರುಗಳು, ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿದ್ರೇ ಅನುಕೂಲ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವೇಳೆ ತುಮಕೂರಿನ ಡಾ. ನಟರಾಜ ಬೂದಾಳು ಹಾಗೂ ಬೆಂಗಳೂರಿನ ಬಿ.ಎನ್. ಮೂರ್ತಿಯವರಿಗೆ ಕನಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಪ್ರಕಟಗೊಂಡ ಎಂಟು ಪುಸ್ತಕಗಳ ಲೋಕಾರ್ಪಣೆ ಮಾಡಲಾಯಿತು.