ಬೆಂಗಳೂರು: ಕೊಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳನ್ನು ಜೈಲಿನಲ್ಲಿ ಕುಳಿತು ಸಂಚು ರೂಪಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವವರ ವಿರುದ್ಧ ಹೆಡೆಮುರಿ ಕಟ್ಟಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಅನ್ಲಾಕ್ ನಂತರ ನಗರದಲ್ಲಿ 10ಕ್ಕಿಂತ ಹೆಚ್ಚು ಕೊಲೆಗಳಾಗಿವೆ. ಈ ಪೈಕಿ ಜೈಲಿನಲ್ಲೇ ಕುಳಿತ ಆರೋಪಿಗಳು ಕೊಲೆಗೆ ಸಂಚು ರೂಪಿಸಿರುವುದು ಗೊತ್ತಾಗಿದೆ.
ಜೂ.19 ರಂದು ನಡೆದ ಆಡುಗೋಡಿ ಠಾಣೆಯ ರೌಡಿಶೀಟರ್ ಜೊಸೆಫ್ ಆಲಿಯಾಸ್ ಬಬ್ಲಿ ಕೊಲೆ ಪ್ರಕರಣದ ತನಿಖೆಯಲ್ಲಿ ವಿಲ್ಸನ್ ಗಾರ್ಡನ್ ಠಾಣೆಯ ರೌಡಿಶೀಟರ್ ನಾಗ ಹಾಗೂ ಮತ್ತೋರ್ವ ರೌಡಿ ಶಿವು ಜೈಲಿನಲ್ಲಿ ಕುಳಿತು ಸಂಚು ರೂಪಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಪೊಲೀಸ್ ಕಮೀಷನರ್ ಕಮಲ್ ಪಂತ್, ಜೈಲಿನಲ್ಲಿರುವ ನಟೋರಿಯಸ್ ರೌಡಿಶೀಟರ್ಗಳು ಹಾಗೂ ಜೈಲಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಪರೋಕ್ಷವಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರ ಕುರಿತಂತೆ ಮಾಹಿತಿ ನೀಡುವಂತೆ ಸಿಸಿಬಿ ಸೇರಿದಂತೆ ಆಯಾ ವಿಭಾಗದ ಡಿಸಿಪಿಗಳಿಗೆ ಮಾಹಿತಿ ನೀಡಲು ತಾಕೀತು ಮಾಡಿದ್ದಾರೆ.
ಬೇರೆ ಜೈಲುಗಳಿಗೆ ರೌಡಿಗಳು ಶಿಫ್ಟ್ ಸಾಧ್ಯತೆ
ಜೈಲಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಸಕ್ರಿಯರಾಗಿರುವ ನಟೋರಿಯಸ್ ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳುವ ಹಿನ್ನೆಲೆ ಬಂಧೀಖಾನೆ ಇಲಾಖೆಯ ಎಡಿಜಿಪಿ ಅಲೋಕ್ ಮೋಹನ್ ಜೊತೆ ಕಮಲ್ ಪಂತ್ ಚರ್ಚೆ ನಡೆಸಿದ್ದಾರೆ. ಸಕ್ರಿಯ ರೌಡಿಶೀಟರ್ಗಳನ್ನು ರಾಜ್ಯದ ಬೆಳಗಾವಿ ಹಿಂಡಲಗಾ ಹಾಗೂ ಬಳ್ಳಾರಿ ಜೈಲು ಸೇರಿದಂತೆ ಇತರೆ ಕಾರಾಗೃಹಕ್ಕೆ ಸ್ಥಳಾಂತರಿಸಲು ಮುಂದಾಗಿದ್ದಾರೆ.
ಅವರ ಸಹಚರರನ್ನು ಒಂದೇ ಕಡೆ ಇರಿಸದೆ ಬೇರೆ ಬೇರೆ ಬ್ಯಾರಕ್ಗಳಲ್ಲಿ ಇರಿಸಲು ಚಿಂತನೆ ನಡೆಸಿದ್ದಾರೆ. ಅಲ್ಲದೆ ಜೈಲಿನ ಒಳಗೆ ಹಾಗೂ ಹೊರಗೆ ರೌಡಿಶೀಟರ್ಗಳ ಸಂಪರ್ಕದಲ್ಲಿ ಪೊಲೀಸ್ ಸಿಬ್ಬಂದಿ ಕಂಡುಬಂದರೆ, ಶಿಸ್ತುಕ್ರಮ ಕೈಗೊಳ್ಳುವ ಮೂಲಕ ನಗರದಲ್ಲಿ ಕ್ರೈಂ ಕಂಟ್ರೋಲ್ ಮಾಡುವ ಗುರಿ ಹೊಂದಿದ್ದಾರೆ.
ಇತ್ತೀಚೆಗೆ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿದಾಗ ಮೊಬೈಲ್, ಸಣ್ಣ ಚಾಕು-ಚೂರಿ ಪತ್ತೆಯಾಗಿದ್ದವು. ಅಷ್ಟೇ ಅಲ್ಲದೇ ತಟ್ಟೆ, ಚಮಚಗಳನ್ನ ಕೂಡ ಆಯುಧಗಳಾಗಿ ಪರಿವರ್ತನೆ ಮಾಡಿಕೊಂಡಿದ್ದರು. ದಾಳಿ ನಡೆಸಿ ಬಿಸಿ ಮುಟ್ಟಿಸಿದರೂ ಕೂಡ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ.ಈ ನಿಟ್ಟಿನಲ್ಲಿ ಜೈಲಿನಲ್ಲಿರುವ ರೌಡಿಗಳಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶಾಕ್ ನೀಡಲು ಮುಂದಾಗಿದ್ದಾರೆ.
ಓದಿ: ವಲಸೆ ಹೋಗಿ ಸಚಿವರಾದವರ ರಾಜೀನಾಮೆ ಅವರ ಪಕ್ಷದ ವಿಚಾರ, ನಮಗೆ ಅತ್ಯವಿಲ್ಲ: ಡಿಕೆಶಿ