ಬೆಂಗಳೂರು: ಇನ್ನೊಂದು ತಿಂಗಳಿನಲ್ಲಿ ಕಳಸಾ ಬಂಡೂರಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಪಡೆದು, ಟೆಂಡರ್ ಕರೆದು ಭೂಮಿ ಪೂಜೆ ಮಾಡುತ್ತೇವೆ. ಅದಕ್ಕೆ ನಿಮಗೆ ವಿಶೇಷ ಆಹ್ವಾನ ಕಳಿಸಿಕೊಡುತ್ತೇವೆ ಎಂದು ಕಳಸಾ ಬಂಡೂರಿ ಯೋಜನೆಯ ಡಿಪಿಆರ್ಗೆ ಒಪ್ಪಿಗೆ ಪಡೆದ ವಿಚಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಹೆಚ್ ಕೆ ಪಾಟೀಲ್ ವಿರುದ್ಧ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಸಿಎಂ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಕೆ.ಪಾಟೀಲರು ಕಳಸಾ ಬಂಡೂರಿ ಯೋಜನೆಗೆ ಡಿಪಿಆರ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಡಿಪಿಆರ್‌ನಲ್ಲಿ ದಿನಾಂಕವೇ ನಮೂದು ಆಗಿಲ್ಲ. ಅದು ಅಧಿಕೃತ ಆದೇಶವೇ ಅಲ್ಲ ಎಂದಿದ್ದಕ್ಕೆ, ನಿಮಗೆ ಡೇಟ್ ಹುಡುಕುವ ಪರಿಸ್ಥಿತಿ ಬಂದಿದೆ. ಯಾಕೆಂದರೆ ಕಾಂಗ್ರೆಸ್ ಡೇಟ್ ಎಕ್ಸ್ಮೈರಿ ಆಗಿದೆ. 29/12/22 ರಂದು ಮಹದಾಯಿ ಡಿಪಿಆರ್ ಗೆ ಅನುಮೋದನೆ ಆಗಿದೆ. ಅಧಿಕೃತವಾಗಿ ಆದೇಶಕ್ಕೆ ಸಹಿ ಮಾಡಿ ಕೇಂದ್ರದಿಂದ ಕಳುಸಿದ್ದಾರೆ. ನಾವು ಜನರಿಗೆ ಮೋಸ ಮಾಡ್ತಿಲ್ಲ, ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಆಡಳಿತಾತ್ಮಕ ಅನುಮತಿ ತಿಂಗಳಲ್ಲಿ ಪೂರ್ಣ: ನಾಡಿನ ನೀರಾವರಿ ಯೋಜನೆಗಳು ಕಾಂಗ್ರೆಸ್ ಕಾಲದಲ್ಲಿ ಅಧೋಗತಿಗೆ ಬಂದಿದ್ದವು.ಈ ತಿಂಗಳಲ್ಲಿ ನಾವು ಕಳಸಾ ಬಂಡೂರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳುತ್ತೇವೆ. ನಂತರ ತಾಂತ್ರಿಕ ಅನುಮೋದನೆ ಪಡೆದು ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.
ಹೆಚ್ ಕೆ ಪಾಟೀಲ್ಗೆ ವಿಶೇಷ ಆಹ್ವಾನ: ಕಾಮಗಾರಿ ಕೆಲಸವನ್ನು ಆರಂಭಿಸುತ್ತೇವೆ. ಕಾಮಗಾರಿ ಚಾಲನೆಗೆ ಭೂಮಿ ಪೂಜೆಯೂ ಮಾಡುತ್ತೇವೆ. ಭೂಮಿ ಪೂಜೆ ಮಾಡಿದಾಗ ಹೆಚ್ ಕೆ ಪಾಟೀಲ್ ಗೆ ವಿಶೇಷ ಆಹ್ವಾನ ಕೊಡುತ್ತೇವೆ. ಅಂದು ಆ ಕಾರ್ಯಕ್ರಮದಲ್ಲಿ ಅವರು ಮಾತನಾಡಲಿ, ನಾನು ಮಾತನಾಡುತ್ತೇನೆ ಎಂದ ಗೋವಿಂದ ಕಾರಜೋಳ ಒಪ್ಪಿತ ಡಿಪಿಆರ್ ನ ಅಧಿಕೃತ ಆದೇಶದ ಪ್ರತಿ ತೋರಿಸಿದರು.
ಇದನ್ನೂ ಓದಿ:ಸಚಿವ ಸ್ಥಾನಕ್ಕಾಗಿ ಸಿಎಂ ದುಂಬಾಲು ಬಿದ್ದ ಜಾರಕಿಹೊಳಿ, ಯೋಗೇಶ್ವರ್: ಅಮಿತ್ ಶಾ ಭೇಟಿ ಮಾಡಿದ ರಾಜ್ಯ ನಾಯಕರು