ಬೆಂಗಳೂರು: ಕಲಬುರಗಿಯ ಖ್ವಾಜಾ ಬಂದೇ ನವಾಜ್ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ನಾಲ್ಕನೇ ವರ್ಷದ 7 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಲಂಚ ನೀಡದಿದ್ದಕ್ಕೆ ಶಸ್ತ್ರಚಿಕಿತ್ಸೆ ವಿಷಯದ ಪ್ರಾಯೋಗಿಕ ಪರೀಕ್ಷೆಯಲ್ಲಿ ಪ್ರಾಧ್ಯಾಪಕರು ಅನುತ್ತೀರ್ಣಗೊಳಿಸಿದ ಆರೋಪಕ್ಕೆ ಸಂಬಂಧಿಸಿದ ವಿಚಾರಣಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಾಧ್ಯಾಪಕರು ಲಂಚ ಕೇಳಿದ ಆರೋಪ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಆದೇಶಿಸಬೇಕು ಹಾಗೂ ಮತ್ತೆ ಪ್ರಾಯೋಗಿಕ ವಿಷಯ ಪರೀಕ್ಷೆ ನಡೆಸಲು ವಿವಿಗೆ ನಿರ್ದೇಶಿಸಬೇಕು ಎಂದು ಕೋರಿ ವಿನೋದಿನಿ ಮತ್ತಿತರ 7 ಮಂದಿ ಎಂಬಿಬಿಎಸ್ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ವಿಶ್ವವಿದ್ಯಾಲಯ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, 4ನೇ ವರ್ಷದ ಎಂಬಿಬಿಎಸ್ ಪದವಿಯ ಸರ್ಜರಿ ವಿಷಯದ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಬೇಕಾದರೆ ತಲಾ ಐದು ಸಾವಿರ ರೂ. ಲಂಚ ನೀಡಬೇಕು ಎಂದು ಪ್ರಾಧ್ಯಾಪಕ ಡಾ. ಸದಾಶಿವ ಪಾಟೀಲ್ 2020ರ ಜ. 2ರಂದು ನಡೆದ ಪುನರ್ ಮನನ ತರಗತಿಗಳ ವೇಳೆ ವಿದ್ಯಾರ್ಥಿಗಳಿಗೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿ ಬಂದಿತ್ತು. ಪ್ರಕರಣದ ಕುರಿತು ವಿಚಾರಣೆಗೆ ಸಮತಿ ರಚಿಸಲಾಗಿತ್ತು. ವಿಚಾರಣೆ ನಡೆಸಿರುವ ಸಮಿತಿ 2020ರ ಫೆ. 19ರಂದು ವರದಿ ಸಲ್ಲಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಶಸ್ತ್ರಚಿಕಿತ್ಸೆ ವಿಷಯದ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಸು ಮಾಡಲು ಪ್ರಾಧ್ಯಾಪಕರು ಲಂಚ ಕೇಳಿದ್ದ ಆರೋಪವಿತ್ತು. ಹಾಗೆಯೇ ವಿದ್ಯಾರ್ಥಿಗಳು ತಲಾ ಐದು ಸಾವಿರ ರೂಪಾಯಿ ಹಣ ನೀಡಿದ್ದರು ಎನ್ನಲಾಗಿತ್ತು. ತದನಂತರವೂ ಪಾಟೀಲ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ ಅರ್ಜಿದಾರರು ಸೇರಿ 18 ವಿದ್ಯಾರ್ಥಿಗಳು 2 ನೇ ಬಾರಿಗೆ ಲಂಚ ನೀಡಲು ನಿರಾಕರಿಸಿದ್ದರು. ಆ ಕಾರಣದಿಂದ ಅರ್ಜಿದಾರರನ್ನು ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಮತ್ತೆ ಪ್ರಾಯೋಗಿಕ ಪರೀಕ್ಷೆ ನಡೆಸಬೇಕು. ಪ್ರಕರಣದ ವಿಚಾರಣೆ ನಡೆಸಿ ಪ್ರಾಧ್ಯಾಪಕ ಡಾ. ಸದಾಶಿವ ಪಾಟೀಲ್ ಅವರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಕೋರಿ ವಿದ್ಯಾರ್ಥಿಗಳು 2020ರ ಫೆ. 12ರಂದು ಸಲ್ಲಿಸಿದ ಮನವಿ ಪತ್ರವನ್ನು ಈವರೆಗೂ ವಿವಿ ಹಾಗೂ ಕಾಲೇಜು ಆಡಳಿತ ಮಂಡಳಿಗೆ ಪರಿಗಣಿಸಿಲ್ಲ ಎಂದು ದೂರಿದ್ದ ವಿದ್ಯಾರ್ಥಿಗಳು, ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು.