ಕೆಆರ್ಪುರ( ಬೆಂಗಳೂರು): ಕೋರ್ಟ್ ಆದೇಶದಂತೆ ಕಗ್ಗದಾಸಪುರ ಮತ್ತು ಬೈರಸಂದ್ರ ಕೆರೆ ಒತ್ತುವರಿ ಪ್ರದೇಶದಲ್ಲಿ ನಿರ್ಮಿಸಿದ್ದ ಶಾಲಾ ಕಾಪೌಂಡ್, ಗುಜರಿ ಅಂಗಡಿ, ದೇವಾಲಯವನ್ನು ತೆರವುಗೊಳಿಸಲಾಗಿದೆ. ತೆರವು ಬಳಿಕ ಸುಮಾರು 30 ಕೋಟಿ ಬೆಲೆಬಾಳುವ ಜಾಗವನ್ನು ಬಿಬಿಎಂಪಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಹೈಕೋರ್ಟ್ ಅದೇಶದ ಮೇರೆಗೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ತೆರವು ಕಾರ್ಯಾಚರಣೆ ನಡೆಸಿ ಸುಮಾರು 45 ಕೋಟಿಗೂ ಹೆಚ್ಚು ಮೌಲ್ಯದ ಜಾಗವನ್ನು ತಹಶೀಲ್ದಾರ್ ನೇತೃತ್ವದಲ್ಲಿ ವಶಪಡಿಕೊಳ್ಳಲಾಗಿದೆ.
ಎರಡು ದಿನಗಳ ಹಿಂದೆ ಕೆ.ಆರ್. ಪುರ ಕ್ಷೇತ್ರದ ಬಸವನಪುರ ವಾರ್ಡ್ನಲ್ಲಿನ ಬಸವನಪುರ ಕೆರೆ ಬಳಿ, ಸ್ಥಳೀಯರ ವಿರೋಧದ ನಡುವೆಯೂ 1 ಎಕರೆ ಜಾಗ ತೆರವು ಮಾಡಿ ವಶಪಡಿಸಿಕೊಂಡು ತಂತಿ ಬೇಲಿಯನ್ನು ಹಾಕಿದರು.
ಇನ್ನು ಇಂದಿನ ತೆರವು ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅಜಿತ್ ಕುಮಾರ್ ರೈ, ಬೆಂಗಳೂರು ಪೂರ್ವ ತಾಲೂಕಿನ ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೆ ಸೇರುವ ಕಗ್ಗದಾಸಪುರ ಸರ್ವೆ ನಂಬರ್ 141 ಮತ್ತು ಬೈರಸಂದ್ರ ಸರ್ವೆ ನಂಬರ್ 5 ರಲ್ಲಿ ಸುಮಾರು ಎರಡು ಎಕರೆ ಪ್ರದೇಶ ಒತ್ತುವರಿಯಾಗಿತ್ತು. ಇಂದು ಶಿಶು ಗೃಹ ಶಾಲೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್, ಕೆರೆ ಅಂಗಳದಲ್ಲಿನ ಗುಜರಿ ಅಂಗಡಿ ಸೇರಿದಂತೆ 30 ಕೋಟಿ ಮೌಲ್ಯದ ಭೂಮಿಯ ಒತ್ತುವರಿ ತೆರವುಗೊಳಿಸಿ ಬಿಬಿಎಂಪಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಐಶ್ವರ್ಯ ಮತ್ತು ಗೋಲ್ಡ್ ಗಾರ್ಡನ್ ವೀವ್ ಎರಡು ಅಪಾರ್ಟ್ಮೆಂಟ್ಗಳು ಕೆರೆಯ ಜಾಗ ಒತ್ತುವರಿ ಮಾಡಿದ್ದು ಸ್ಟ್ರಕ್ಚರ್ ಇಂಜಿನಿಯರ್ ಜೊತೆ ಮಾತನಾಡಿ ಹೈಕೋರ್ಟ್ನಲ್ಲಿ ಕಾಲಾವಕಾಶ ಕೇಳಿರುವ ಕಾರಣ ಮತ್ತು ಜಲಕಂಟೇಶ್ವರ ದೇವಲಯದ ಟ್ರಸ್ಟ್ನವರು ಕೋರ್ಟಿನಲ್ಲಿ ಸ್ಟೇ ತಂದಿದ್ದು ಇಂದು ತೆರವುಗೊಳಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ತೆರವು ಕಾರ್ಯಾಚರಣೆ ಸಂಪೂರ್ಣ ಮುಗಿದ ನಂತರ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೆರೆ ಅಭಿವೃದ್ಧಿ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ಸರ್ಕಾರದಿಂದಲೂ ಸಹ ಕೆಲವು ಜಾಗ ಒತ್ತುವರಿ ಮಾಡಿಕೊಂಡಿದ್ದು , ಮುಂದಿನ ದಿನಗಳಲ್ಲಿ ಅವುಗಳ ಒತ್ತುವರಿಗೆ ಬಿಬಿಎಂಪಿ ಮುಖ್ಯ ಇಂಜಿನಿಯರ್ಗೆ ಕೋರ್ಟ್ ಆದೇಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ರು.