ಬೆಂಗಳೂರು : ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮಾನ್ಸೂನ್ ದುರ್ಬಲಗೊಂಡಿದೆ. ಉತ್ತರ ಒಳನಾಡಿನಲ್ಲಿ ಚುರುಕಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞರಾದ ಸಿ ಎಸ್ ಪಾಟೀಲ್ ತಿಳಿಸಿದರು.
ಪಣಂಬೂರಿನಲ್ಲಿ 3 ಸೆಂ.ಮೀ, ರಾಯಚೂರಿನಲ್ಲಿ 5.2 ಸೆಂ.ಮೀ, ಕಲಗಟ್ಟಿಗೆ 4.5 ಸೆಂ.ಮೀ, ಚಿತ್ರದುರ್ಗದಲ್ಲಿ 7.4 ಸೆಂ.ಮೀ ಮಳೆ ದಾಖಲಾಗಿದೆ. ರಾಜ್ಯದ ಒಳನಾಡಿನಿಂದ ತಮಿಳುನಾಡಿನವರೆಗೆ ಟ್ರಫ್ ಇದ್ದು, ಉತ್ತರ ಒಳನಾಡಿನಲ್ಲಿ ಮಳೆ ಸರ್ಕ್ಯುಲೇಷನ್ ಇದೆ. ಇದರ ಪರಿಣಾಮ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಜುಲೈ 21, 22, 24ರಂದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಜುಲೈ 23 ರಂದು ಮಳೆಯ ಪ್ರಮಾಣ ಕರ್ನಾಟಕ ಒಳನಾಡಿನಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಜುಲೈ 23ರಂದು ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದೆ. ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಬೀದರ್, ಕಲಬುರಗಿ, ಬೆಳಗಾವಿ, ಧಾರವಾಡ, ಬಾಗಲಕೋಟೆ, ಹಾವೇರಿಯ ಕೆಲವು ಕಡೆ ಜುಲೈ 23ರಂದು ಭಾರೀ ಮಳೆಯಾಗಲಿದೆ. ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ. ಜುಲೈ 22ರಂದು ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಜುಲೈ 25ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಬಹುದು ಎಂದರು.
ಜುಲೈ 21, 22, 25ರಂದು ಕರಾವಳಿ ಜಿಲ್ಲೆಗಳಲ್ಲಿ ಜುಲೈ 23, 24ರಂದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಬಹುದು. ಜುಲೈ 23, 24ರಂದು ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗಲಿದ್ದು, ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಜುಲೈ 21, 22ರಂದು ಬೆಂಗಳೂರಿನಲ್ಲಿ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.