ಬೆಂಗಳೂರು: ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಕನ್ನಡಿಗರಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗೆಗೆ ಅರಿವು ಮತ್ತು ಒಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ವಿನೂತನ ಪ್ರಯೋಗವನ್ನು ಮಾಡಲಾಗಿದೆ. ಕರ್ನಾಟಕ ರಾಜ್ಯದ ಭವ್ಯ ಇತಿಹಾಸ ಚರಿತ್ರೆ ಮತ್ತು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕ-ವನ(ಕನ್ನಡ ವನ) ಎಂಬ ಯೋಜನೆಯನ್ನು ನಗರದ ಟೆಕ್ಕಿಗಳಾದ ಸವಿ ಮತ್ತು ಶ್ರೀಧರ್ ನೇತೃತ್ವದ ತಂಡ ಹಮ್ಮಿಕೊಂಡಿದೆ.
ಕ-ವನ ಯೋಜನೆ (ಕನ್ನಡ ವನ ಯೋಜನೆ) : ಕರ್ನಾಟಕ ರಾಜ್ಯವನ್ನು ಉದ್ಯಾನವನದಂತೆ ಚಿತ್ರಿಸಲಾಗಿದ್ದು, ಇಲ್ಲಿ ಫಲಕಗಳು, ಧ್ವನಿ ಮುದ್ರಣಗಳು, ದೃಶ್ಯ ತುಣುಕುಗಳು, ಆಕೃತಿಗಳು, ಸ್ಮಾರಕಗಳ ಮೂಲಕ ಕರ್ನಾಟಕದ ಬಗೆಗಿನ ವಿಶಿಷ್ಟ ಮಾಹಿತಿಗಳನ್ನು ತೋರಿಸಲಾಗುತ್ತದೆ. ಈ ಕ-ವನ ಯೋಜನೆಯನ್ನು ಡಿಸ್ನಿ ಲ್ಯಾಂಡ್ ರೀತಿಯ ಮನೋರಂಜನಾ ಪಾರ್ಕ್ನಂತೆ ಅನುಷ್ಠಾನಗೊಳಿಸಲು ಮುಂದಾಗಿದ್ದು, ನಗರದ ಸಣ್ಣ ಉದ್ಯಾನವನಗಳಲ್ಲಿ ಕ-ವನ ಯೋಜನೆಯನ್ನು ವಿಂಗಡಣೆ ಮಾಡಲಾಗುವುದು. ಈ ಕುರಿತು ಸಂಬಂಧಿಸಿದ ಸರ್ಕಾರದ ಎಲ್ಲ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಯೋಜನೆಯ ರೂವಾರಿ ಎಸ್. ಆರ್. ಸವಿ ತಿಳಿಸಿದ್ದಾರೆ.
ಶಾಲಾ-ಕಾಲೇಜು ಆವರಣ, ಸರ್ಕಾರಿ ಕಚೇರಿಗಳ ಆವರಣ, ವಿಶ್ವವಿದ್ಯಾನಿಲಯಗಳ ಆವರಣ, ಮಠ-ಮಂದಿರಗಳ ಆವರಣ, ಆಟದ ಮೈದಾನ, ಮೃಗಾಲಯಗಳಲ್ಲಿ ಯೋಜನೆಯ ವಿಸ್ತರಣೆಯನ್ನು ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಯೋಜನೆಯ ಫ್ರಾಂಚೈಸಿ ತೆಗೆದುಕೊಂಡು ಈ ಯೋಜನೆಯನ್ನು ಇತರರು ಅಳವಡಿಸಿಕೊಳ್ಳಬಯಸುವವರಿಗೆ ಬೇಕಾದ ಮಾಹಿತಿ ಮತ್ತು ವಸ್ತುಗಳನ್ನು ಸರ್ಕಾರಿ ಇಲಾಖೆ ಕೊಡುವಂತಾಗಬೇಕು. ಒಂದರ ನಂತರ ಇನ್ನೊಂದರಂತೆ ಹಲವು ಜಿಲ್ಲೆ, ತಾಲೂಕು, ಹೋಬಳಿಗಳಲ್ಲಿ ತಾತ್ಕಾಲಿಕವಾಗಿ ಚಲನಚಿತ್ರಗಳಿಗೆ ಸೆಟ್ ಹಾಕುವ ರೀತಿಯಲ್ಲಿ ಈ ಯೋಜನೆಯ ಅನುಷ್ಠಾನವನ್ನು ಮಾಡಬಹುದು. ಇದರಿಂದ ಸಾರ್ವಜನಿಕರಿಗೆ ಕನ್ನಡ ಭಾಷೆಯ ಆಳ ಮತ್ತು ಕರ್ನಾಟಕ ರಾಜ್ಯದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಮನದಟ್ಟಾಗಲು ಪೂರಕವಾಗಿರುತ್ತದೆ. ಕನ್ನಡಕ್ಕೆ ಸಂಭಂದಪಟ್ಟ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಷ್ಟು ಜ್ಞಾನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ಸಂಪೂರ್ಣ ಚಿತ್ರಣ : ಕರ್ನಾಟಕ ರಾಜ್ಯವನ, ಕನ್ನಡ ಭಾಷೆ ವನ, ಕರ್ನಾಟಕ ಕ್ರೀಡೆ ವನ, ಸಸ್ಯ ಮತ್ತು ಪ್ರಾಣಿ ವನ, ಕರ್ನಾಟಕ ಆಡಳಿತ ವನ, ಕಲೆ ಮತ್ತು ಸಂಸ್ಕೃತಿವನ, ಚಂದನವನ, ಕರ್ನಾಟಕ ಇತಿಹಾಸ ವನ, ಪಾಕಶಾಲೆ, ಕನ್ನಡ ಸಾಹಿತ್ಯವನ, ಪರಿಸರ ಕವಿತೆಗಳ ಬೋರ್ಡ್‌ಗಳು ಇವೆಲ್ಲವನ್ನು ಕ-ವನ ಯೋಜನೆ ಹೊಂದಿರಲಿದ್ದು, ಕರ್ನಾಟಕದ ಸಂಪೂರ್ಣ ಚಿತ್ರಣವನ್ನು ನೀಡಲಿದೆ ಎಂದು ಸವಿ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಮೈಸೂರು ಚಾಮುಂಡಿ ಬೆಟ್ಟದ ಮಹಾನಂದಿಗೆ 38 ಬಗೆಯ ಮಹಾಭಿಷೇಕ