ಮೈಸೂರು: ಲಾಕ್ಡೌನ್ ಕಾರಣದಿಂದ ಮುಂದೂಡಲಾಗಿದ್ದ ಕೆ-ಸೆಟ್ ಪರೀಕ್ಷೆ ಜೂನ್ 21 ನಡೆಯಲಿದೆ. ಸ್ಥಗಿತಗೊಂಡಿದ್ದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗ ಮತ್ತೆ ಆರಂಭವಾಗಿದ್ದು, ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಮೈಸೂರು ವಿಶ್ವವಿದ್ಯಾನಿಲಯ ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ನಡೆಸಲು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು , 250 ರೂ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಏಪ್ರಿಲ್ 12 ರಂದು ನಡೆಸಲು ನಿರ್ಧರಿಸಿತ್ತು. ಆದರೆ ಕೊರೊನಾ ಲಾಕ್ಡೌನ್ ನಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗಿದ್ದು, 2019 ರಲ್ಲಿ ಕೆ-ಸೆಟ್ ನಡೆಸುವ ಮಾನ್ಯತೆ ನವೀಕರಣ ವಿಳಂಬವಾದ ಹಿನ್ನೆಲೆ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ.
ಲಾಕ್ಡೌನ್ ಹಿನ್ನೆಲೆ ಪ್ರವೇಶಾತಿ ಅವಧಿಯನ್ನು ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನಾಂಕವಾಗಿದ್ದು , ಈಗಾಗಲೇ ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಜೂನ್ 21 ರಂದು ಕೆ-ಸೆಟ್ ಪರೀಕ್ಷೆ ನಡೆಯುತ್ತದೆ ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆಯಲ್ಲಿ ತಿಳಿಸಿದೆ.