ಬೆಂಗಳೂರು : ರಾಜ್ಯದಲ್ಲಿ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2022 ಅನ್ನು ಸಚಿವ ಈಶ್ವರಪ್ಪ ಮಂಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಯಲ್ಲಿ ದುರ್ನಡೆಯಿಂದ ವಜಾಗೊಂಡು ಶಿಕ್ಷೆಗೊಳಗಾಗಿದ್ದ ನೌಕರ ಹಾಗೂ ಸಹಕಾರ ಸಂಘ ಮತ್ತು ಸಂಸ್ಥೆಗಳ ಅಧ್ಯಕ್ಷ, ಸದಸ್ಯತ್ವದಿಂದ ಯಾವುದೇ ವ್ಯಕ್ತಿಯನ್ನು ಶಿಕ್ಷೆಗೊಳಪಡಿಸಿ ತೆಗೆದುಹಾಕಿದ್ದಲ್ಲಿ ಅಂತಹ ವ್ಯಕ್ತಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ನಿಲ್ಲುವುದರಿಂದ ಅನರ್ಹಗೊಳಿಸುವ ಅಂಶ ಸೇರಿಸಲಾಗಿದೆ. ಇದೊಂದು ಸಣ್ಣ ತಿದ್ದುಪಡಿ. ಹಾಗಾಗಿ, ಬಿಲ್ಗೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು.
ನಂತರ ಬಿಲ್ ಮೇಲೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಎಸ್ ರವಿ, ಸರ್ಕಾರಿ ಸೇವೆಯಿಂದ ವಜಾಗೊಂಡು ಜೈಲಿಗೆ ಹೋದ ನೌಕರರನ್ನು ಸ್ಪರ್ಧಿಸದಂತೆ ಮಾಡುವ ನಿರ್ಧಾರ ಒಳ್ಳೆಯದು. ಆದರೆ, ಸಹಕಾರ ಸಂಘ ಮತ್ತು ಸಂಸ್ಥೆಗಳ ಅಧ್ಯಕ್ಷ, ಸದಸ್ಯತ್ವದಿಂದ ತೆಗೆದು ಹಾಕಿದ್ದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಚುನಾವಣೆಗೆ ನಿಲ್ಲುವುದರಿಂದ ಅನರ್ಹಗೊಳಿಸುವ ಅಂಶ ಸೇರಿಸಲಾಗಿದೆ.
ಉಸ್ತುವಾರಿ ಸಮಿತಿ ರಚಿಸಿ ಬಿಡಿ ಇದು ಸರಿಯಲ್ಲ. ಸಹಕಾರ ಸಂಘಗಳ ಅಧ್ಯಕ್ಷ, ಸದಸ್ಯರ ವಿರುದ್ಧ 29ಸಿ ಅಡಿ ನಾಮಪತ್ರ ಸಲ್ಲಿಸದಂತೆ ತಡೆದು ಕೆಲವರು ದುರ್ಲಾಭ ಪಡೆಯುವ ಸಾಧ್ಯತೆ ಇದೆ. ಹಾಗಾಗಿ, ನೌಕರರ ವಿಚಾರ ಸ್ವಾಗತ. ಸಹಕಾರ ಸಂಘದ ಸದಸ್ಯರ ವಿಚಾರದಲ್ಲಿ ನಿರ್ಧಾರ ಬದಲಿಸಿ ಎಂದು ಮನವಿ ಮಾಡಿದರು. ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ತಾಲೂಕು ಪಂಚಾಯತ್ಗೆ ಅಧಿಕಾರ ಇಲ್ಲ. ಅದು ಹಲ್ಲುಕಿತ್ತ ಹಾವುನಂತಿದೆ. ಹಾಗಾಗಿ, ಸುಮ್ಮನೆ ಚುನಾವಣೆ ಯಾಕೆ ಮಾಡುತ್ತೀರಿ. ಜನ ಚುನಾವಣೆಗೆ ನಿಂತು ಹಣ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸುಮ್ಮನೆ ಉಸ್ತುವಾರಿ ಸಮಿತಿ ರಚಿಸಿ ಬಿಡಿ ಎಂದರು.
ಬಿಲ್ ಮೇಲಿನ ಸುದೀರ್ಘ ಚರ್ಚೆಗೆ ಉತ್ತರಿಸಿದ ಸಚಿವ ಕೆ. ಎಸ್ ಈಶ್ವರಪ್ಪ, ತ್ರೀ ಟೈರ್ ಎಲೆಕ್ಷನ್ ಸಿಸ್ಟಂ ಕೇಂದ್ರ ಸರ್ಕಾರದ ಕೈಯಲ್ಲಿದೆ. ಅದು ನಮ್ಮ ಕೈಯಲ್ಲಿ ಇಲ್ಲ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ತಾಲೂಕು ಪಂಚಾಯತ್ಗೆ ಅಧಿಕಾರವಿಲ್ಲ. ನನಗೆ ವೈಯಕ್ತಿವಾಗಿ ತಾಪಂ ಬೇಡ. ಅದರ ಅಗತ್ಯ ಇಲ್ಲ. ನಮಗೆ ಅಧಿಕಾರ ಇದ್ದಿದ್ದರೆ ತಾಲೂಕು ಪಂಚಾಯತ್ ರದ್ದುಪಡಿಸಿಬಿಡುತ್ತಿದ್ದೆವು ಎಂದರು.
ಚುನಾವಣೆ ಮುಂದೂಡಿಕೆ ಉದ್ದೇಶವಿಲ್ಲ : ಬಹುತೇಕ ಸದಸ್ಯರ ಸಾಮಾನ್ಯ ಪ್ರಶ್ನೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ಗಳಿಗೆ ಚುನಾವಣೆ ನಡೆಸುತ್ತೀರೋ, ಇಲ್ಲವೋ ಎನ್ನುವುದಾಗಿದೆ. ಚುನಾವಣೆ ನಡೆಸಬೇಕು ಎಂದೇ ನಾವು ಗ್ರಾಮ ಪಂಚಾಯತ್ ಚುನಾವಣೆ ಮಾಡಿದೆವು. ಜಿಪಂ, ತಾಪಂ ಅವಧಿ ಮುಗಿಯುವ ಮೊದಲೇ ನಾವು ಚುನಾವಣೆಗೆ ಸಿದ್ದ ಎಂದು ಆಯೋಗಕ್ಕೆ ಪತ್ರ ಬರೆದಿದ್ದೆವು. ಆದರೆ, ಮೀಸಲಾತಿ ಕುರಿತು ಸಾಕಷ್ಟು ಆಕ್ಷೇಪಣೆಗಳು ಬಂದ ಕಾರಣಕ್ಕೆ ನಾವು ಸಮಿತಿ ರಚಿಸಿದ್ದೇವೆ. ಚುನಾವಣೆ ಮುಂದೂಡಿಕೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಒಂದು ನಿರ್ಧಾರಕ್ಕೆ ಬರುತ್ತೇವೆ : ನಮಗೆ 2010ರ ತೀರ್ಪು ನೆಪ ಅಲ್ಲ. ಈಗ ಚುನಾವಣೆ ಮಾಡಿದರೆ ಒಬಿಸಿ ಬಿಟ್ಟು ಮಾಡಬೇಕು. ಒಬಿಸಿ ಮೀಸಲಾತಿ ಬಿಟ್ಟು ಮಾಡಿ ಎಂದರೆ ಮಾಡೋಣ, ಅದಕ್ಕೆ ನಾವು ಸಿದ್ದರಿದ್ದೇವೆ. ಆದರೆ, ಅದು ಸರಿಯಲ್ಲ. ಹಾಗಾಗಿಯೇ, ಮಾರ್ಚ್ 31ರಂದು ಬೆಳಗ್ಗೆ ಸಭೆ ಕರೆಸಿದ್ದೇವೆ. ತಜ್ಞರು ಅದರಲ್ಲಿ ಇರಲಿದ್ದಾರೆ. ಕಾನೂನಾತ್ಮಕವಾಗಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದರು.
ಮಹಾರಾಷ್ಟ್ರದಲ್ಲಿ ಒಬಿಸಿಗಳಿಗೆ ಅನ್ಯಾಯವಾಗಿದೆ. ಇಲ್ಲಿ ಹಾಗಾಗಲು ಬಿಡಲ್ಲ. ಚುನಾವಣೆಯನ್ನು ಮಾಡುತ್ತೇವೆ. ಒಬಿಸಿಗೂ ಮೀಸಲು ಕೊಡುತ್ತೇವೆ ಎನ್ನುತ್ತಾ ವಿಧೇಯಕ ಅಂಗೀಕಾರಕ್ಕೆ ಮನವಿ ಮಾಡಿದರು. ನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2022 ಅನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಓದಿ: ನಮ್ಮ ಸರ್ಕಾರದಲ್ಲಿ ಯಾರೂ ಕೂಡಾ ಕಮಿಷನ್ ತೆಗೆದುಕೊಳ್ಳುವುದಿಲ್ಲ: ಶಾಸಕ ರೇಣುಕಾಚಾರ್ಯ