ಬೆಂಗಳೂರು: ಗ್ರಾಮೀಣ ಭಾಗದ ರೈತರ ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಹೆಬ್ಬಾಳದ ಜಿಕೆವಿಕೆ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಬಾರಿ ರಾಷ್ಟ್ರಮಟ್ಟದಲ್ಲಿ ನಮ್ಮ ಹಲವು ಗ್ರಾಮ ಪಂಚಾಯತಿಗಳು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಗ್ರಾಮ ಪಂಚಾಯತ್ಗಳ ಅಭಿವೃದ್ಧಿಗೆ ಏನು ಅವಶ್ಯಕತೆ ಇದೆಯೋ ಅದನ್ನು ತಿಳಿಸಿದರೆ ಅಗತ್ಯ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು. ಶಾಸಕರು ಹಾಗೂ ಸಂಸದರು ಗೆಲ್ಲುವುದು ಸುಲಭ. ಆದರೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುವುದು ತುಂಬಾ ಕಷ್ಟವಾಗಿದ್ದು, ಆಯ್ಕೆಯಾಗಬೇಕಾದರೆ ಹರಸಾಹಸ ಮಾಡಬೇಕಾಗಲಿದೆ ಎಂದರು.