ಬೆಂಗಳೂರು: ಕಾಂಗ್ರೆಸ್ಗೊಂದು ಬೇರೆಯವರಿಗೊಂದು ಕಾನೂನಿಲ್ಲ. ಡಿ.ಕೆ.ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿಯನ್ನು ವಿರೋಧಿಸಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರ ವರ್ತನೆ ಖಂಡನೀಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಕುಮಾರಕೃಪಾದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾಲಾ ಪ್ರಕರಣಗಳು ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಖಲಾಗಿವೆ. ಇಂತಹ ಸಂದರ್ಭದಲ್ಲಿಯೂ ಸಿಬಿಐನವರು ದಾಳಿ ಮಾಡಬಾರದು, ತಪ್ಪಿತಸ್ಥರು ಎನ್ನುವುದನ್ನು ಗಮನಿಸಿ ಅವರ ಬಗ್ಗೆ ಕ್ರಮ ಕೈಗೊಳ್ಳಬಾರದು ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ನೋಡಿ ತುಂಬಾ ಆಶ್ಚರ್ಯವಾಗುತ್ತಿದೆ. ಈ ಹಿಂದೆ ಯಡಿಯೂರಪ್ಪ ಮನೆಯಲ್ಲಿ ಇದೇ ರೀತಿ ಸಿಬಿಐ ದಾಳಿ ನಡೆದಾಗ ಇವರೆಲ್ಲರ ಹೇಳಿಕೆ ಏನಿತ್ತು ಎಂದು ನೆನಪಿಸಿಕೊಳ್ಳಲಿ. ಉಪ್ಪು ತಿಂದವರು ನೀರು ಕುಡಿಯುತ್ತಿದ್ದಾರೆ. ಅನುಭವಿಸಲಿ ಎನ್ನುವ ಮಾತುಗಳನ್ನೆಲ್ಲ ಹೇಳಿದ್ದರು. ಈಗ ಡಿ.ಕೆ.ಶಿವಕುಮಾರ್ಗೆ ಬೇರೆ ಕಾನೂನು ಇದೆಯೇ? ಇಂದು ದಾಳಿಯಾಗಿರುವುದು ಯಡಿಯೂರಪ್ಪ ಹೇಗೆ ತಪ್ಪಿತಸ್ಥ ಅಲ್ಲ ಎಂದು ಹೊರ ಬಂದರೋ ಹಾಗೆಯೇ ಡಿ.ಕೆ.ಶಿವಕುಮಾರ್ ಕೂಡ ಹೊರ ಬರಲಿ. ಅಲ್ಲಿಯವರೆಗೂ ಸಿಬಿಐ ತನಿಖೆಗೆ ಸಹಕಾರ ಕೊಡಬೇಕು. ಅವರಿಗೆ ಬೇರೆ ದಾರಿ ಇಲ್ಲ ಎಂದರು.
ಡಿ.ಕೆ.ಶಿವಕುಮಾರ್ ಮನೆ ಮೇಲೆ ದಾಳಿಯಾದ ಮಾತ್ರಕ್ಕೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಸೇರಿ ಹಲವರು ನೀಡುತ್ತಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ. ರಾಜಕೀಯ ಕ್ಷೇತ್ರದಲ್ಲಿರುವವರು ಹವಾಲಾ ಮಾಡಬಹುದು. ಕಪ್ಪು ಹಣ ಎಷ್ಟು ಬೇಕಾದರೂ ಹೊಂದಿರಬಹುದು ಎನ್ನುವಂತಾಗುತ್ತದೆ. ಕಾಂಗ್ರೆಸ್ ನಾಯಕರಿಗೆ ಇದು ಒಳ್ಳೆಯದಲ್ಲ. ತನಿಖೆ ಆಗುತ್ತಿದೆ ಆಗಲಿ. ತನಿಖೆಯ ನಂತರ ಸೀತೆಯ ರೂಪದಂತೆ ಪವಿತ್ರ ರೂಪದಲ್ಲಿ ಹೊರ ಬರಲಿದ್ದಾರೆ ಎನ್ನುವುದನ್ನು ಅವರು ಹೇಳಿದರೆ ನಾನು ಸಂತೋಷ ಪಡುತ್ತೇನೆ ಎಂದರು.