ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎನ್ನುವ ಬೇಡಿಕೆ ಕೆಲವರಿಂದ ಬಂದಿದೆ. ಈ ರೀತಿಯ ಚರ್ಚೆ ಕೆಲವರಿಂದ ನಡೆಯುತ್ತಿರುವುದು ನಿಜ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆಲವರು ಮುಖ್ಯಮಂತ್ರಿ ಬದಲಾವಣೆಯಾಗಬೇಕು ಅಂತಿದ್ದಾರೆ. ಅದೇ ರೀತಿ ಮತ್ತೆ ಕೆಲವರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಇರಬೇಕು ಅಂತಿದ್ದಾರೆ. ಇನ್ನು ಕೆಲವರು ದೆಹಲಿಗೂ ಹೋಗಿ ಬಂದಿದ್ದಾರೆ ಎಂದು ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದರು.
ನಾನು ಬಹಿರಂಗ ಹೇಳಿಕೆ ಕೊಡಬೇಡಿ ಎಂದು ಎಲ್ಲರಿಗೂ ಹೇಳಿದ್ದೇನೆ. ಮೂರು ಪಕ್ಷದ ಸರ್ಕಾರ ಎಂದಾಗ ಯೋಗೀಶ್ವರ್ಗೂ ಇರುವುದಿದ್ದರೆ ಇರಿ, ಇಲ್ಲ ರಾಜೀನಾಮೆ ಕೊಡಿ, ಆದ್ರೆ ಈ ರೀತಿಯ ಹೇಳಿಕೆ ನೀಡಬೇಡಿ ಎಂದಿದ್ದೆ. ರೇಣುಕಾಚಾರ್ಯ ಸಹಿ ಸಂಗ್ರಹ ಮಾಡಬಾರದು. ಇದನ್ನೇ ನಾನು ಅವರಿಗೂ ಹೇಳಿದ್ದೆ. ನಾಲ್ಕು ಗೋಡೆ ಮಧ್ಯೆ ಇದು ಚರ್ಚೆಯಾಗಬೇಕು. ಆದರೆ ಅದನ್ನು ಬಿಟ್ಟು ಹೊರಗಡೆ ಚರ್ಚೆಯಾಗುತ್ತಿದೆ.
ಈ ಗೊಂದಲ ಬಗೆಹರಿಸುವ ಸಲುವಾಗಿಯೇ ಇವತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬರುತ್ತಿದ್ದಾರೆ. ಇಂದು ಸಚಿವರ ಸಭೆ ನಡೆಸಲಿದ್ದು, ನಾಳೆ ಎಂಎಲ್ಎ, ಎಂಎಲ್ಸಿ ಸಭೆ ಕರೆದಿದ್ದಾರೆ. ನಾಡಿದ್ದು ನಮ್ಮ ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಎಲ್ಲವೂ ಚರ್ಚೆಯಾಗಲಿದೆ. ಬಿಜೆಪಿಯಲ್ಲಿ ಸಣ್ಣ-ಪುಟ್ಟ ಗೊಂದಲಗಳಿವೆ. ಅರುಣ್ ಸಿಂಗ್ ಬಳಿ ಗೊಂದಲಗಳ ಬಗ್ಗೆ ನಾನು ಗಮನಕ್ಕೆ ತರುತ್ತೇನೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಕಟೀಲ್ ಪುನರುಚ್ಚಾರ
ಕೇಂದ್ರ ನಾಯಕರ ಬಗ್ಗೆ ಗೌರವವಿದೆ. ಅವರು ಬರುತ್ತಿದ್ದು, ಸಮಸ್ಯೆ ಬಗೆಹರಿಸುತ್ತಾರೆ. ಸಮಸ್ಯೆ ಹೇಳಿಕೊಳ್ಳೋಕೆ ಎಲ್ಲರಿಗೂ ಅವಕಾಶವಿದೆ. ಇಲಾಖೆಯಲ್ಲಿ ಸಿಎಂ ಬಿಟ್ಟು ಬೇರೆಯವರು ಮೂಗು ತೂರಿಸ್ತಾರೆಂಬ ವಿಚಾರ ಇದೆ. ಯಾರ್ಯಾರು ಇಲಾಖೆಯಲ್ಲಿ ಮೂಗು ತೂರಿಸಿದ್ದಾರೆ ಎನ್ನುವುದನ್ನು ಅರುಣ್ ಸಿಂಗ್ ಮುಂದೆ ಹೇಳಿಕೊಳ್ಳಲಿ ಎಂದು ತಮ್ಮ ಶಾಸಕರಿಗೆ ಈಶ್ವರಪ್ಪ ಸಲಹೆ ನೀಡಿದರು.
ಸಿಎಂ ಬದಲಾವಣೆ ವಿಷಯ:
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತಾ, ಅಥವಾ ಏನಾಗುತ್ತೆ ಎಂದು ನನಗೆ ಗೊತ್ತಿಲ್ಲ. ಇದನ್ನೆಲ್ಲ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಇವತ್ತಿನ ಸಭೆಯಲ್ಲಿ ಸಿಎಂ ಇರ್ತಾರೋ ಇಲ್ವೋ ಗೊತ್ತಿಲ್ಲ. ನಾಳೆ ಎಲ್ಲರ ವೈಯುಕ್ತಿಕ ಅಭಿಪ್ರಾಯಕ್ಕೆ ಅವಕಾಶವಿದೆ. ಬಿಜೆಪಿಯಲ್ಲಿ ಗೊಂದಲವಿದೆ ಎನ್ನುವುದನ್ನು ನಾನು ಒಪ್ಪುತ್ತೇನೆ. ನಾಯಕತ್ವದ ಬದಲಾವಣೆ ವಿಷಯದಲ್ಲಿ ಏನು ಬೇಕಾದರೂ ಆಗಬಹುದು. ಎಲ್ಲವನ್ನ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದರು.
ಪಕ್ಷದ ತೀರ್ಮಾನಕ್ಕೆ ಬದ್ಧ:
17 ಜನ ಕಾಂಗ್ರೆಸ್, ಜೆಡಿಎಸ್ನಿಂದ ಬಂದವರಿಂದ ಸರ್ಕಾರ ಬಂತು, ಅವರ ಪರಿಶ್ರಮದಿಂದ ಸರ್ಕಾರ ನಿರ್ಮಾಣವಾಗಿದೆ ಎನ್ನುವುದು ನಿಜ. ಅವರಿಂದ ಗೊಂದಲ ಆಗಿದೆ ಅಂತ ಹೇಳಲ್ಲ. ರಾಜ್ಯದ ಜನ ಬಹುಮತ ಕೊಡಲಿಲ್ಲ. ಕೊಟ್ಟಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ ಎಂದು ಹೇಳಿದ್ದೇನೆಯೇ ಹೊರತು ಅವರು ಬಂದಿದ್ದಕ್ಕೆ ಗೊಂದಲ ಆಗಿದೆ ಎಂದಿಲ್ಲ. ಅವರು ಬಂದ ಮೇಲೆ ಸರ್ಕಾರ ಬಂದಿದೆ, ಅವರಿಂದ ಈ ರೀತಿ ಆಯ್ತು ಅಂತಾ ಹೇಳಲ್ಲ. ನನಗಿಂತ ಪಾರ್ಟಿ ದೊಡ್ಡದು. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧ ಎಂದರು.
ಗೊಂದಲ ಸರಿ ಮಾಡೋಕೆ ಅರುಣ್ ಸಿಂಗ್ ಬರುತ್ತಿದ್ದಾರೆ:
ಚುನಾವಣೆ ನಂತರ ನಾನು ಮುಖ್ಯಮಂತ್ರಿ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು. ಕಾಂಗ್ರೆಸ್ ಅಧಿಕಾರಕ್ಕೂ ಬರಲಿಲ್ಲ. ಲೋಕಸಭೆ ಚುನಾವಣೆಯಲ್ಲೂ ಹೇಳಿದ್ದರು, ಆದರೆ ಅವರು ಅಧಿಕಾರಕ್ಕೆ ಬರಲಿಲ್ಲ. ಅವರು ಆಸೆ ಇಟ್ಟುಕೊಳ್ಳಬೇಕು ಅಷ್ಟೇ. ನಮ್ಮಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಎಲ್ಲ ಭಾಗದಲ್ಲಿ ಸುತ್ತಿ ಬರುತ್ತಿದ್ದಾರೆ. ಪಕ್ಷವನ್ನು ಮತ್ತಷ್ಟು ಬಲಗೊಳಿಸುತ್ತಿದ್ದೇವೆ. ನಮ್ಮ ಗೊಂದಲಗಳನ್ನು ಬಳಸಿಕೊಳ್ಳೋ ಶಕ್ತಿ ಕಾಂಗ್ರೆಸ್ ನವರಿಗಿಲ್ಲ. ಈ ಕ್ಷಣಕ್ಕೂ ನಮ್ಮಲ್ಲಿ ಗೊಂದಲವಿದೆ. ಆ ಗೊಂದಲವನ್ನ ಸರಿ ಮಾಡೋಕೆ ಅರುಣ್ ಸಿಂಗ್ ಬರುತ್ತಿದ್ದಾರೆ. ಅರುಣ್ ಸಿಂಗ್ ಬಂದ ಮೇಲೆ ಏನು ಬೇಕಾದರೂ ಆಗಬಹುದು. ರಾಷ್ಟ್ರೀಯ ನಾಯಕರು ಇದರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.