ಬೆಂಗಳೂರು: ವಿವಾದಗಳಿಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೂ ಬಿಡಿಸಲಾರದ ನಂಟಿದೆ. ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಇವರು ಈ ಬಾರಿ ಭ್ರಷ್ಟಾಚಾರದ ಗುರುತರ ಆರೋಪದ ಸುಳಿಯಲ್ಲಿ ಸಿಲುಕಿದ್ದಾರೆ. ಗುತ್ತಿಗೆದಾರನ ಆತ್ಮಹತ್ಯೆಯ ಹಿಂದೆ ಈಶ್ವರಪ್ಪ ಹೆಸರು ತಳುಕುಹಾಕಿಕೊಂಡಿದ್ದು, ಸರ್ಕಾರವೂ ಮುಜುಗರಕ್ಕೆ ಸಿಲುಕುವಂತಾಗಿದೆ. ಕಾಂಗ್ರೆಸ್ ರಾಜ್ಯಾದ್ಯಂತ ಹೋರಾಟ ಶುರು ಮಾಡಿದ್ದು, ಈಶ್ವರಪ್ಪ ರಾಜೀನಾಮೆಯ ಮಾತೇ ಇಲ್ಲ ಎನ್ನುತ್ತಿದ್ದಾರೆ.
- ಬಿಎಸ್ವೈ ವಿರುದ್ಧ ವೈಮನಸ್ಸು: 2021ರ ಮಾರ್ಚ್ ಅಂತ್ಯದಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಿದ್ದ ಈಶ್ವರಪ್ಪ, ಬಿಜೆಪಿ ಹೈಕಮಾಂಡ್ಗೆ ಪತ್ರ ಬರೆದಿದ್ದರು. ಈ ಪತ್ರ ಬಹಿರಂಗವಾಗಿ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಸಂಪುಟ ಸದಸ್ಯರಾಗಿ ಮುಖ್ಯಮಂತ್ರಿ ವಿರುದ್ಧವೇ ಆರೋಪ ಮಾಡಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು. ಮುಖ್ಯಮಂತ್ರಿಗಳ ರಾಜೀನಾಮೆ ಅಥವಾ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು ಎನ್ನುವ ಒತ್ತಾಯವನ್ನು ಕಾಂಗ್ರೆಸ್ ಕೂಡ ಮಾಡಿತ್ತು.
- 'ಮಾತು ವಾಪಸ್ ಪಡೆಯುತ್ತೇನೆ': 2021ರ ಆಗಸ್ಟ್ನಲ್ಲಿ 'ಜೋಕರ್ ಎಂದು ಈಶ್ವರಪ್ಪ ಹೆಸರು ಬದಲಿಸಿಕೊಳ್ಳಬೇಕು' ಎಂದು ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಕ್ಕೆ ತಿರುಗೇಟು ನೀಡುವ ಭರದಲ್ಲಿ ಸಚಿವ ಈಶ್ವರಪ್ಪ ಅವಾಚ್ಯ ಪದ ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈಶ್ವರಪ್ಪ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಮಾತಿನ ಭರದಲ್ಲಿ ಅವಾಚ್ಯ ಶಬ್ದ ಬಳಸಿದೆ, ಕೋಪದಲ್ಲಿ ಈ ಮಾತು ಬಂತು. ಆ ಮಾತು ವಾಪಸ್ ಪಡೆಯುತ್ತೇನೆ ಎಂದು ಹೇಳಿಕೆ ವಾಪಸ್ ಪಡೆದುಕೊಂಡಿದ್ದರು.
- ಕೆಂಪುಕೋಟೆ ಮೇಲೆ ಭಗವಾಧ್ವಜ ವಿವಾದ: ಇದಾದ ನಂತರ, 2022 ರ ಫೆಬ್ರವರಿ 18 ರಂದು ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಬದಲು ಭಗವಾಧ್ವಜ ಹಾರಿಸುವ ಕುರಿತು ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಈಶ್ವರಪ್ಪ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಹ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕಾಯಿತು.
- ಹರ್ಷ ಕೊಲೆ ಕೇಸ್‌ನಲ್ಲಿ ವಿವಾದ: ಫೆಬ್ರವರಿ 22ರಂದು ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಿಸಿದಂತೆ ವಿಧಿಸಲಾಗಿದ್ದ ಸೆಕ್ಷನ್ 144 ಉಲ್ಲಂಘಿಸಿ ಮೃತದೇಹದ ಮೆರವಣಿಗೆ ನಡೆಸಿದ್ದು, ಅದರಲ್ಲಿ ಭಾಗವಹಿಸಿ ವಿವಾದ ಸೃಷ್ಟಿಸಿಕೊಂಡಿದ್ದರು. ಸಚಿವರಾಗಿದ್ದು ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆ ಎಂದು ಟೀಕೆ ಎದುರಿಸಬೇಕಾಯಿತು. ಸಚಿವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.
- ಗುತ್ತಿಗೆದಾರರಿಂದ ಕಮಿಷನ್ ಆರೋಪ: ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರಿಂದ ಶೇ.40 ರಷ್ಟು ಕಮಿಷನ್ಗೆ ಬೇಡಿಕೆ ಇರಿಸಲಾಗುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದಿಂದ ರಾಜ್ಯಪಾಲರಿಗೆ ದೂರು ನೀಡಲಾಯಿತು. ಪ್ರಧಾನಿ ಮೋದಿಗೂ ಪತ್ರ ಬರೆಯಲಾಯಿತು. ಪ್ರಮುಖವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ನೀರಾವರಿ ಇಲಾಖೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಆರೋಪ ಮಾಡಲಾಗಿತ್ತು. ಆಗಲೇ ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ ಪಾಟೀಲ್ ಅವರು ಕಮಿಷನ್ ಆರೋಪ ಮಾಡಿದ್ದರು. ಆದರೂ ಈಶ್ವರಪ್ಪ ಆರೋಪ ತಳ್ಳಿಹಾಕಿಕೊಂಡು ಬಂದಿದ್ದರು. ಆದರೆ, ಈಗ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆಗೆ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಆರೋಪ ಕೇಳಿಬಂದಿದ್ದು, ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಹೋರಾಟಕ್ಕಿಳಿದಿದೆ.
'ರಾಜೀನಾಮೆ ಮಾತೇ ಇಲ್ಲ': ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸಂಪುಟ ಸಹೋದ್ಯೋಗಿಗಳು, ಪಕ್ಷದ ನಾಯಕರು ಈಶ್ವರಪ್ಪ ಬೆನ್ನಿಗೆ ನಿಂತಿದ್ದು, ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್ ಘೋಷಿಸಿದೆ. ಇದೇ ವೇಳೆ ರಾಜೀನಾಮೆಯ ಮಾತೇ ಇಲ್ಲ ಎನ್ನುತ್ತಿದ್ದಾರೆ ಈಶ್ವರಪ್ಪ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಯಾವ ನಿರ್ದೇಶನ ನೀಡಲಿದೆ, ಈಶ್ವರಪ್ಪ ರಾಜೀನಾಮೆ ನೀಡ್ತಾರಾ? ಅನ್ನೋದನ್ನು ಕಾಲವೇ ನಿರ್ಧರಿಸಲಿದೆ.
ಇದನ್ನೂ ಓದಿ: ಸಿಎಂ ಸರ್ಕಾರಿ ನಿವಾಸಕ್ಕೆ ಮುತ್ತಿಗೆ, ನಾಳೆಯಿಂದ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ