ಬೆಂಗಳೂರು: ಕೆ.ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸೂಚನೆ ನೀಡದೆ ಕಲಾಪಕ್ಕೆ ಗೈರಾಗಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅವರಿಬ್ಬರೂ ನನಗೆ ಸೂಚನೆ ನೀಡದೆ ಕಲಾಪಕ್ಕೆ ಗೈರಾಗಿದ್ದಾರೆ. ಉಳಿದ ಗೈರಾದ ಶಾಸಕರು ನನ್ನ ಅನುಮತಿ ಪಡೆದಿದ್ದಾರೆ. ಯಾವುದೇ ಸಚಿವರು ಗೈರಾದರೆ ಸದನದ ಸಂಪ್ರದಾಯದಂತೆ ನನಗೆ ತಿಳಿಸಬೇಕು. ಮುಂದಿನ ದಿನ ಈ ಸಂಪ್ರದಾಯವನ್ನು ಪಾಲಿಸಬೇಕು ಎಂಬುದು ಎಲ್ಲರ ಮನವಿಯಾಗಿದೆ. ಎಲ್ಲರೂ ಈ ಸದನದ ಘನತೆ ಗೌರವ ಹೆಚ್ಚಿಸಬೇಕು ಎಂದು ಅವರು ತಿಳಿಸಿದರು.
ವಿಧೇಯಕಗಳ ಚರ್ಚೆ: ಮಳೆಗಾಲದ ಅಧಿವೇಶನ ಯಶಸ್ವಿಯಾಗಿ ನಡೆದಿದೆ. 55 ಗಂಟೆ 14 ನಿಮಿಷ ಕಾರ್ಯ ಕಲಾಪ ನಡೆದಿದೆ. 16 ವಿಧೇಯಕಗಳನ್ನು ಮಂಡಿಸಿದ್ದೇವೆ. 14 ವಿಧೇಯಕ ಅಂಗೀಕಾರವಾಗಿದೆ. 1 ವಿಧೇಯಕ ಹಿಂಪಡೆದುಕೊಂಡಿದ್ದೇವೆ. 2 ವಿಧೇಯಕಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕಿದೆ. ನಿಯಮ 69 ಅಡಿಯಲ್ಲಿ 7 ಸೂಚನೆಗಳನ್ನು ಚರ್ಚೆ ಮಾಡಲಾಗಿದೆ. 150 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ. 1,632 ಪ್ರಶ್ನೆಗಳಿಗೆ ಲಿಖಿತ ಮೂಲಕ ಉತ್ತರಿಸಲಾಗಿದೆ. 85 ಗಮನ ಸೆಳೆಯುವ ಸೂಚನೆಯನ್ನು ಕಾರ್ಯಕಲಾಪ ಪಟ್ಟಿಗೆ ಸೇರಿಸಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ 15ರಂದು ನನ್ನ ನೇತೃತ್ವದಲ್ಲಿ ಅತ್ಯುತ್ತಮ ಶಾಸಕ ಸಮಿತಿಯ ಸಭೆ ನಡೆಸಲಾಗಿದೆ. ಸಿಎಂ ಮತ್ತು ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ರು. ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಡಿಸೆಂಬರ್ನಲ್ಲಿ ನಡೆಯುವ ಬೆಳಗಾವಿಯ ಅಧಿವೇಶನದಲ್ಲಿ ನೀಡುತ್ತೇವೆ ಎಂದರು.
ಕಾರ್ಯಕಲಾಪ ಸುಗಮ: ಈ ಬಾರಿ ಶೇ.99ರಷ್ಟು ಹಾಜರಾತಿ ಇತ್ತು. ಅತಿವೃಷ್ಠಿ ವಿಚಾರದಲ್ಲಿ ನೇರವಾಗಿ 36 ಜನ ಸದಸ್ಯರು ಭಾಗಿಯಾಗಿ ಚರ್ಚಿಸಿದ್ದಾರೆ. ಈ ಬಾರಿ ಅಧಿವೇಶನದಲ್ಲಿ ಕಾರ್ಯಕಲಾಪ ವೀಕ್ಷಿಸಲು ಮುಕ್ತ ಅವಕಾಶ ನೀಡಲಾಗಿತ್ತು. ಒಟ್ಟು 15,641 ಜನ ನೇರವಾಗಿ ಸದನಕ್ಕೆ ಬಂದು ಸದನವನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ್ದಾರೆ. ಅಧಿವೇಶನದ ಕೊನೆ ದಿನ ಜೆಡಿಎಸ್ ಸದಸ್ಯರ ಧರಣಿಯಿಂದ ಇಂದು ಕಾರ್ಯಕಲಾಪ ಸರಿಯಾಗಿ ನಡೆಸಲು ಆಗಿಲ್ಲ. ಇನ್ನುಳಿದ ಎಲ್ಲಾ ದಿನಗಳು ಕಾರ್ಯಕಲಾಪ ಸುಗಮವಾಗಿ ನಡೆದಿದೆ ಎಂದು ಅವರು ಹೇಳಿದರು.
ಓದಿ: ಹಬ್ಬ... ಸರಣಿ ರಜೆಗಳ ವೇಳೆ ಖಾಸಗಿ ಬಸ್ಗಳ ದುಬಾರಿ ಪ್ರಯಾಣ ದರಕ್ಕೆ ಅಂಕುಶ: ಶ್ರೀರಾಮುಲು