ಬೆಂಗಳೂರು: ತಾವರೆಕೆರೆಗೆ ಹರಿಯುತ್ತಿದ್ದ ಕೆಸಿ ವ್ಯಾಲಿಯ ಸಂಸ್ಕರಿತ ತ್ಯಾಜ್ಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಇದನ್ನು ಕಂಡ ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಕೆಗೆ ಯೋಗ್ಯವಾಗುವ ರೀತಿಯಲ್ಲಿ ಪರಿವರ್ತಿಸಿ ಕೆರೆ ತುಂಬಿಸಲಾಗುವುದು ಎಂದಿದ್ದ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭರವಸೆ ಹುಸಿಯಾಗಿವೆ. ಜೊತೆಗೆ ಕೆರೆಯ ಮಲಿನಗೊಳ್ಳುವ ಮುನ್ಸೂಚನೆ ನೀಡಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಇಲಾಖೆಗಳ ನಿರ್ಲಕ್ಷ್ಯ:
ತ್ಯಾಜ್ಯ ನೀರನ್ನು ಸಂಸ್ಕರಿಸಬೇಕಿದ್ದ ಜಲಮಂಡಳಿ, ಶುದ್ಧ ನೀರನ್ನಷ್ಟೇ ಪೂರೈಕೆ ಮಾಡಬೇಕಿದ್ದ ಸಣ್ಣ ನೀರಾವರಿ ಇಲಾಖೆ, ಗುಣಮಟ್ಟದ ಮೇಲೆ ನಿಗಾ ಇಡಬೇಕಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ, ಯೋಜನೆಯ ಪ್ರದೇಶದಲ್ಲಿ ಎಂತಹ ನೀರು ಮರುಬಳಕೆ ಆಗುತ್ತಿದೆ ಎಂಬುದನ್ನು ಗಮನಿಸಬೇಕಿದ್ದ ಕೇಂದ್ರ ಅಂತರ್ಜಲ ಮಂಡಳಿ ಹೀಗೆ ಸಾಲು ಸಾಲು ಸರಕಾರಿ ಸಂಸ್ಥೆಗಳೆಲ್ಲ ತಮ್ಮ ಹೊಣೆ ಮರೆತು ಕುಳಿತಿದ್ದಾರೆ. ಅಷ್ಟೇ ಅಲ್ಲದೆ, ಈ ಭಾಗದ ಹಳ್ಳಿಗಳಿಗೆ ಶುದ್ಧ ನೀರು ಕೊಟ್ಟು ಭಗೀರಥರಾಗಬೇಕಿದ್ದ ಆಡಳಿತಗಾರರು, ನಮ್ಮ ಪಾಲಿಗೆ ವಿಷವುಣಿಸುವ ಕೆಲಸ ಮಾಡುತ್ತಿವೆ ಎಂದು ಗ್ರಾಮಸ್ಥರು ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಡಿಮೆ ಆದ ನೀರಿನ ಪ್ರಮಾಣ:
ದೊಡ್ಡ ದೊಡ್ಡ ಗಾತ್ರದ ಪೈಪ್ಗಳ ಮುಖಾಂತರ ಕೋಲಾರ ಭಾಗಕ್ಕೆ ಹರಿದಿರುವ ನೀರಿನಿಂದ ತಾವರೆಕೆರೆಗೆ ಕೇವಲ 10 ಇಂಚು ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಕೆರೆಯ ಸ್ವಲ್ಪ ಭಾಗದಲ್ಲಿ ಇರುವ ಹಳ್ಳಕೊಳ್ಳಗಳು ತುಂಬಿದೆ. ಆದರೆ ಕಳೆದ 15-20 ದಿನಗಳ ಕಾಲ ಉತ್ತಮವಾಗಿ ನೀರು ಬಿಟ್ಟಿದ್ದು, ಈಗ 2-3 ದಿನಗಳಿಂದ ಕೇವಲ 4 ಇಂಚು ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಅದಕ್ಕೂ ನಿರ್ದಿಷ್ಟವಾದ ಸಮಯ ನಿಗದಿಯಾಗಿಲ್ಲ. ಯಾವುದೋ ಸಮಯದಲ್ಲಿ ಕೇವಲ 4-5 ತಾಸು ಮಾತ್ರ ನೀರು ಹರಿಸುತ್ತಿದೆ. ಇದರಿಂದ ಕೆರೆ ತುಂಬಲು ಕನಿಷ್ಟ ಪಕ್ಷ 1-2 ವರ್ಷಗಳೇ ಬೇಕಾಗುತ್ತದೆ ಎಂಬುದು ರೈತರ ಆತಂಕವಾಗಿದೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯ ಕೆರೆಗಳಿಗೆ (ಕೃಷಿ ಬಳಕೆ ಹಾಗೂ ಅಂತರ್ಜಲ ವೃದ್ಧಿಗಾಗಿ) ಬೆಂಗಳೂರಿನ ಚರಂಡಿ ನೀರನ್ನು ಸಂಸ್ಕರಿಸಿ ಹರಿಸಲು ರೂಪುಗೊಂಡಿದ್ದ ಕೆ.ಸಿ.ವ್ಯಾಲಿ ಯೋಜನೆಯ ಹರಿಸುತ್ತಿದ್ದಾರೆ. ಈ ನೀರಿನಿಂದಾಗಿ ಬೆಳಂದೂರು ಕೆರೆಗಳಂತೆ ತಾವರೆಕೆರೆಯು ರೂಪಾಂತರ ಹೊಂದುವ ಭೀತಿ ಎದುರಾಗಿದೆ. ಈಗಾಗಲೇ ಚರಂಡಿ ನೀರನ್ನು ತುಂಬಿಸಿರುವ ಅಲ್ಲಿನ ಕೆರೆಗಳು ನೊರೆಯ ದುರ್ವಾಸನೆಯಿಂದ ಕೂಡಿದೆ. ಅದೇ ರೀತಿ ನಮ್ಮ ಕೆರೆಗಳು ಮಾರ್ಪಾಡಾಗುತ್ತವೆ ಎಂಬ ಭೀತಿಯಲ್ಲಿ ತಾವರೆಕೆರೆ ಜನರಿದ್ದಾರೆ.
ತಾವರೆಕೆರೆ ನಿವಾಸಿ ಜಗದೀಶ್ ಮಾತನಾಡಿ, ಶುದ್ಧೀಕರಿಸಿದ ಉತ್ತಮ ನೀರು ಹರಿಸುವುದಾಗಿ ತಿಳಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈಗ ಕೊಳಚೆ ನೀರನ್ನು ಕೆರೆಗೆ ಹಾರಿಸುತ್ತಿದ್ದಾರೆ. ಕೇವಲ ಚುನಾವಣೆ ಗಿಮಿಕ್‌ಗೋಸ್ಕರ ಕೊಳಚೆ ನೀರನ್ನು ಬಿಟ್ಟಿದ್ದಾರೆ. ಕೆರೆಯ ನೀರು ವಿಷಪೂರಿತವಾಗಿ ಪ್ರಾಣಿ ಪಕ್ಷಿಗಳು ಕುಡಿದು ಏನಾದರು ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ವಿಷಾದ ವ್ಯಕ್ತಪಡಿಸಿದರು