ಬೆಂಗಳೂರು : ಭ್ರಷ್ಟರ ಪಾಲಿಗೆ ಸಿಂಹಸ್ವಪ್ನರಾಗಿದ್ದ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಎಸ್ ಎನ್ ಸತ್ಯನಾರಾಯಣ ಅವರನ್ನು ಪಂಜಾಬ್-ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಪಂಜಾಬ್-ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಿ ಸಿಜೆಐ ನೇತೃತ್ವದ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಸಚಿವಾಲಯ ನ್ಯಾ. ಸತ್ಯನಾರಾಯಣ ಅವರನ್ನು ಶುಕ್ರವಾರ ವರ್ಗಾವಣೆ ಮಾಡಿ ಆದೇಶಿಸಿದೆ.
ಭ್ರಷ್ಟಾಚಾರದ ಮತ್ತು ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ನ್ಯಾಯಾಲಯದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ನ್ಯಾ. ಸುಂಕೇನಹಳ್ಳಿ ನರಸಿಂಹಯ್ಯ ಸತ್ಯನಾರಾಯಣ ಅವರು, ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಕಳೆದ ವರ್ಷ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರ ಆರೋಪದಡಿ ನೆಲಮಂಗಲ ತಹಶೀಲ್ದಾರ್, ದೊಡ್ಡಬಳ್ಳಾಪುರ ಎಸಿ, ಕೋಲಾರದ ಪೊಲೀಸ್ ವರಿಷ್ಠಾಧಿಕಾರಿಗಳನ್ನೇ ನ್ಯಾಯಾಂಗ ಬಂಧನಕ್ಕೊಳಪಡಿಸಲು ಆದೇಶಿಸಿದ್ದರು.
ಈ ವರ್ಷದ ಆರಂಭದಲ್ಲಿ ಕರ್ತವ್ಯಲೋಪ ಮತ್ತು ನ್ಯಾಯಾಲಯಕ್ಕೆ ಗೌರವ ತೋರಿಸದ ಆರೋಪದಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನೇ ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದ್ದರು. ಹೀಗಾಗಿ ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳು ನ್ಯಾ. ಎಸ್ ಎನ್ ಸತ್ಯನಾರಾಯಣ ಅವರ ಪೀಠದಲ್ಲಿ ವಿಚಾರಣೆ ಇದೆ ಎಂದರೆ ಕನಸಲ್ಲೂ ಬೆಚ್ಚಿ ಬೀಳುತ್ತಿದ್ದರು. ಇದೀಗ ಅವರ ವರ್ಗಾವಣೆ ಆಗಿರುವುದರಿಂದ ರಾಜ್ಯಕ್ಕೆ ನಷ್ಟ ಎಂದೇ ಭಾವಿಸಬಹುದಾಗಿದೆ.