ಬೆಂಗಳೂರು: ಕಳೆದ ಗಣರಾಜ್ಯೋತ್ಸವದಂದು ಅಂಬೇಡ್ಕರ್ ಭಾವಚಿತ್ರವಿಟ್ಟಲ್ಲಿ ಧ್ವಜಾರೋಹಣ ಮಾಡುವುದಿಲ್ಲವೆಂದು ತಿಳಿಸಿದ್ದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ.
ಕರ್ನಾಟಕ ನ್ಯಾಯಾಂಗ ಅಕಾಡೆಮಿ ನಿರ್ದೇಶಕರಾಗಿದ್ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ್ ಅವರನ್ನು ಬೆಂಗಳೂರು ನಗರದ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಿ ಕರ್ನಾಟಕ ಹೈಕೋರ್ಟ್ ಪ್ರಭಾರಿ ರಿಜಿಸ್ಟ್ರಾರ್ ಜನರಲ್ ಬಿ. ಮುರಳೀಧರ್ ಪೈ ಅಧಿಸೂಚನೆ ಹೊರಡಿಸಿದ್ದಾರೆ.
ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಟಿ. ವೆಂಕಟೇಶ್ ನಾಯ್ಕ್ ಅವರನ್ನು ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ, ಸಂತೋಷ್ ಗಜಾನನ್ ಭಟ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ, ಎಸ್.ಮಹಾಲಕ್ಷ್ಮಿ ನೆರಲೆ ಅವರನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯ ಮಂಡಳಿ ಮೇಲ್ವಿಚಾರಣಾಧಿಕಾರಿ ಹುದ್ದೆಗೆ ನೇಮಕ ಮಾಡಲಾಗಿದೆ.
ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ಅವರನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರನ್ನಾಗಿ, ಕೆ.ಬಿ.ಗೀತಾ ಅವರನ್ನು ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ, ತ್ಯಾಗರಾಜ ಎನ್. ಇನವಲ್ಲಿ ಅವರನ್ನು ಬೆಂಗಳೂರು ನಗರದ ಸ್ಮಾಲ್ ಕಾಸಸ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರನ್ನಾಗಿ ವರ್ಗಾಯಿಸಲಾಗಿದೆ.
ಜೆ.ಎನ್.ಸುಬ್ರಮಣ್ಯ ಅವರನ್ನು ಬೆಂಗಳೂರಿನ ಕೈಗಾರಿಕಾ ನ್ಯಾಯ ಮಂಡಳಿಯ ಮೇಲುಸ್ತುವಾರಿ ಅಧಿಕಾರಿಯನ್ನಾಗಿ, ಮುಸ್ತಾಫಾ ಹುಸೈನ್ ಸಯದ್ ಅಜೀಜ್ ಅವರನ್ನು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಮಾರುತಿ ಬಗಾಡೆ ಅವರನ್ನು ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗೆ ವರ್ಗಾವಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.
ಪ್ರಭಾವತಿ ಮೃತ್ಯುಂಜಯ ಹಿರೇಮಠ ಅವರನ್ನು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ, ನರಹರಿ ಪ್ರಭಾಕರ ಮರಾಥೆ ಅವರನ್ನು ಬೆಂಗಳೂರು ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರನ್ನಾಗಿ ಮತ್ತು ಸಂತೋಷ್ ಗಜಾನನ್ ಭಟ್ ಅವರನ್ನು ಬೆಂಗಳೂರಿನ 66ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.
ಇದನ್ನೂ ಓದಿ: ಸಿಇಟಿ ಸೀಟು ಹಂಚಿಕೆ: ರಿಪಿಟರ್ಸ್ಗಳ ಪಿಯುಸಿ ಅಂಕ ಪರಿಗಣಿಸಲು ಹೈಕೋರ್ಟ್ ತೀರ್ಪು, ರ‍್ಯಾಂಕ್ ಲಿಸ್ಟ್ನಲ್ಲಿ ಏರುಪೇರು..?