ಬೆಂಗಳೂರು : ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿದ್ದರು. 370ನೇ ವಿಧಿ ರದ್ದತಿ ನಿರ್ಧಾರದ ಸಂಬಂಧ ಇಂದು ನಗರದ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಏಕತಾ ಅಭಿಯಾನವನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜೆ.ಪಿ.ನಡ್ಡಾ ಭಾಗಿಯಾಗಿದ್ದರು.
ಕಾರ್ಯಕ್ರಮದ ಬಳಿಕ ಆರ್ಟಿಕಲ್ 370 ಕುರಿತ ಪುಸ್ತಕವನ್ನ ನೀಡಲು ಡಾಲರ್ಸ್ ಕಾಲೋನಿಯ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ನಿವಾಸಕ್ಕೆ ಭೇಟಿ ನೀಡಿದರು. ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅರುಣ್ ಕುಮಾರ್ ಸೇರಿದಂತೆ ಹಲವರು ನಡ್ಡಾಗೆ ಸಾಥ್ ನೀಡಿದರು.
7 ದಶಕಗಳ ಬಳಿಕ ಐತಿಹಾಸಿಕ ನಿರ್ಣಯ : ಸದಾನಂದ ಗೌಡ
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, 70 ವರ್ಷಗಳ ನಂತರ ಐತಿಹಾಸಿಕ ನಿರ್ಣಯವನ್ನ ಮೋದಿ ಸರ್ಕಾರ ತೆಗೆದುಕೊಂಡಿದೆ. ದೇಶದ ಐಕ್ಯತೆಗೆ ಧಕ್ಕೆಯಾಗಿದ್ದ ನಿಯಮಾವಳಿಗಳನ್ನು ತೆಗೆದುಹಾಕಲಾಗಿದೆ. ರಾಹುಲ್ ದ್ರಾವಿಡ್ ಪಾಕಿಸ್ತಾನ ಸೇರಿದಂತೆ ದೇಶ-ವಿದೇಶಗಳಲ್ಲಿ ಕ್ರಿಕೆಟ್ ಆಡಿದವರು. ಹಾಗೆ ಕಾಶ್ಮೀರದಲ್ಲೂ ಕ್ರಿಕೆಟ್ ಆಡಿದ್ದಾರೆ. ಮೊನ್ನೆ ಸುಧಾಮೂರ್ತಿ, ಬನ್ನಂಜೆ ಗೋವಿಂದ ಆಚಾರ್ಯ ಸೇರಿದಂತೆ ಹಲವರನ್ನ ಭೇಟಿ ಮಾಡಿದ್ದೇವೆ. ದೇಶದ ಏಕತೆಗೆ ಒತ್ತು ಕೊಡಲು, ಒಂದು ದೇಶ ಒಂದು ಸಂವಿಧಾನ ಇರಬೇಕು ಅನ್ನೋದು ನಮ್ಮ ಉದ್ದೇಶ ಎಂದು ತಿಳಿಸಿದರು.
ನೆರೆಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸಿದ ಸದಾನಂದ ಗೌಡರು, ರಾಜ್ಯಕ್ಕೆ ನೀಡಲಾದ ಹಣ ಡಿಸೆಂಬರ್‌ನಲ್ಲಿ ಬರಬೇಕಿತ್ತು. ಈಗಾಗಲೇ 380 ಕೋಟಿ ರೂ. ಹಣ ರಿಲೀಸ್ ಆಗಿದೆ. ಕರ್ನಾಟಕ ಮಾತ್ರವಲ್ಲ ಕೇರಳ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಅಲ್ಲಿ ಕೂಡ ಪರಿಹಾರ ನೀಡಬೇಕಿದೆ. ಮಳೆ ನಿಲ್ಲದೇ ಪರಿಹಾರ ನೀಡಲು ಸಾಧ್ಯವಿಲ್ಲ. ಜೀವಹಾನಿ ಆಗದಂತೆ ಎಚ್ಚರಿಕೆವಹಿಸಿ ಕ್ರಮಕೈಗೊಳ್ಳಲಾಗ್ತಿದೆ. ಹಾನಿಯ ಕುರಿತು ವರದಿ ಬಂದ ನಂತರ ಎಲ್ಲರಿಗೂ ಒಂದು ತಿಂಗಳೊಳಗೆ ಎಲ್ಲಾ ರೀತಿಯ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದರು.
15 ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರ :
6 ತಿಂಗಳೊಳಗೆ ಚುನಾವಣೆ ನಡೆಯಬೇಕು. ಯಾವತ್ತು ಸರ್ಕಾರ ರಚನೆ ಮಾಡಿದೆವೋ, ಅಂದಿನಿಂದಲೇ ಬೈ ಎಲೆಕ್ಷನ್‌ಗೆ ರೆಡಿಯಾಗಿದ್ದೀವಿ. ಲೋಕಸಭಾ ಚುನಾವಣೆಯಲ್ಲಿ 25+1 ಹಾಗೆ, 15 ಸ್ಥಾನವನ್ನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.