ಬೆಂಗಳೂರು: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ ನೀಡಿದ್ದು, ಪಕ್ಷದ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದಾರೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ನಡ್ಡಾ ಅವರ ರಾಜ್ಯದ ಭೇಟಿ ಮಹತ್ವ ಪಡೆದುಕೊಂಡಿದೆ. ಯಲಹಂಕದ ರಮಡ ರೆಸಾರ್ಟ್ ನಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ಪ್ರಶಿಕ್ಷಣ ಶಿಬಿರದ ಸಮಾರೋಪ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆಗಮಿಸಿದರು.
ಜೆ ಪಿ ನಡ್ಡಾ ಅವರಿಗೆ ಪೂರ್ಣ ಕುಂಭದೊಂದಿಗೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಸ್ವಾಗತ ಕೋರಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಕಳೆದ ಎರಡು ದಿನಗಳಿಂದ ರಾಷ್ಟ್ರೀಯ ಒಬಿಸಿ ಪ್ರಶಿಕ್ಷಣ ಕಾರ್ಯಕ್ರಮ ನಡೆಯುತ್ತಿದ್ದು, ಕಡೆಯ ದಿನವಾದ ಇಂದು ಸಂಘಟನಾತ್ಮಕ ವಿಷಯಗಳ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಮಾರೋಪ ಸಭೆ ನಂತರ ಜೆ ಪಿ ನಡ್ಡಾ ಕೆಲ ಸಮಯ ರಾಜ್ಯದ ನಾಯಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಸಂಘಟನಾತ್ಮಕ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಂತನೆ ನಡೆಸಿದ್ದು, ಅವಕಾಶ ಸಿಕ್ಕಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಲೋಕಸಭೆ ಸದಸ್ಯನನ್ನಾಗಿ ಮಾಡಬೇಕೆಂದು ಜಗ್ಗೇಶ್ ಕಂಡಿಷನ್ ಹಾಕಿದ್ದರು: ಸಚಿವ ಆರ್ ಅಶೋಕ್