ಬೆಂಗಳೂರು: ಸಮಾಜದ ಕಾವಲುಗಾರನಾಗಿ ಪತ್ರಿಕೋದ್ಯಮ ಕೆಲಸ ಮಾಡಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ತುಂಬಾ ಬದಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಪತ್ರಿಕೋದ್ಯಮದಲ್ಲಿ ಯಶಸ್ವಿ 50 ವರ್ಷಗಳನ್ನು ಪೂರೈಸಿರುವ ಹಿರಿಯ ಪತ್ರಕರ್ತ ರಾರಾಜಿ ಶೈಲೇಶ ಚಂದ್ರಗುಪ್ತ ಅವರಿಗೆ ಸನ್ಮಾನ ಮಾಡಿದರು. ಬಳಿಕ ಮಾತಾನಾಡಿದ ಅವರು, ಇತ್ತೀಚಿನ ಪತ್ರಿಕೋದ್ಯಮದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಪತ್ರಿಕೋದ್ಯಮ ಸಮಾಜಮುಖಿಯಾಗಿರಬೇಕು. ಆದರೆ ಪ್ರಸ್ತುತ ಪತ್ರಿಕೋದ್ಯಮ ಸಮಾಜಕ್ಕಿಂತ ವ್ಯಕ್ತಿಗತವಾಗಿದೆ ಎಂದರು.
ಸಮಾಜದ ಆಗು ಹೋಗುಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಅಲ್ಲದೇ, ಆ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಪತ್ರಿಕೋದ್ಯಮ ಸಮಾಜದ ಕಾವಲುಗಾರನಾಗಿ ಕೆಲಸ ಮಾಡಬೇಕಿದೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.