ಕೆಆರ್ಪುರ: ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲಿ ಕೊರೊನಾ ಮಹಾಮಾರಿಯಿಂದಾಗಿ ಅನೇಕ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಅಲ್ಲದೆ ಕೆಲವು ಕಂಪನಿಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೆಆರ್ಪುರ ಕ್ಷೇತ್ರದ ರಾಮಮೂರ್ತಿನಗರದ ಎನ್ಆರ್ಐ ಲೇಔಟ್ನಲ್ಲಿ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು.
ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಚಾಲನೆ ನೀಡಿದರು. ಈ ಉದ್ಯೋಗ ಮೇಳಕ್ಕೆ ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಎಲ್ಲಾ ಕಡೆಯಿಂದ ಐದು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಸುಮಾರು 125ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಿದ್ದು, ಕೆಲವು ಉದ್ಯೋಗ ಆಕಾಂಕ್ಷಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಪ್ರಮಾಣಪತ್ರಗಳನ್ನು ನೀಡಿದರು. ನೂರಕ್ಕೂ ಹೆಚ್ಚು ಜನರು ವಿವಿಧ ಕಂಪನಿಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆಯಾಗಿದ್ದಾರೆ.
ಓದಿ: ಬೆಂಗಳೂರಲ್ಲಿ ಬೃಹತ್ ಉದ್ಯೋಗ ಮೇಳ: 120 ಕಂಪನಿಗಳಿಂದ 5 ಸಾವಿರ ಉದ್ಯೋಗಾವಕಾಶ
ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉದ್ಯೋಗ ಸೃಷ್ಟಿಯ ಕನಸು ನನಸಿಗಾಗಿ ಈ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಯುವ ಪೀಳಿಗೆಗೆ ಉದ್ಯೋಗ ಕಲ್ಪಿಸಿಕೊಡುವ ಕನಸು ಪ್ರಧಾನಿ ಮೋದಿಯವರದ್ದು. ಆದ್ದರಿಂದಲೇ ರಾಜ್ಯದ ಯುವ ಪ್ರತಿಭೆಗಳಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಭಾರತ ದೇಶ ಜಗತ್ತಿನ 2ನೇ ಅತಿದೊಡ್ಡ ಜನಸಂಖ್ಯೆವುಳ್ಳ ಹಾಗೂ ಯುವಜನತೆಯನ್ನು ಹೊಂದಿರುವ ದೇಶವಾಗಿದ್ದು, ಈ ದೇಶದಲ್ಲಿ ಉದ್ಯೋಗ ಸೃಷ್ಟಿಸುವುದು ಸ್ವಲ್ಪ ಕಷ್ಟಕರವಾಗಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಉದ್ಯೋಗ ಸೃಷ್ಟಿಸುವ ಕನಸನ್ನು ಕೆಆರ್ಪುರಂ ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ಮಾಡಲಾಗಿದ್ದು, ಇದು ಸಂತಸದ ವಿಷಯ. ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳಕ್ಕೆ ಬಂದಿದ್ದು, ಯುವ ಪೀಳಿಗೆಗೆ ಉದ್ಯೋಗ ಕಲ್ಪಿಸಿಕೊಡುವ ಮೂಲಕ ಜವಾಬ್ದಾರಿ ನೀಡಬೇಕು ಎಂದರು.
ಇನ್ನು ಅಸಂಘಟಿತ ಕಾರ್ಮಿಕರಿಗೆ ಉಚಿತ ಬಸ್ ಪಾಸ್, ಲೇಬರ್ ಕಾರ್ಡ್, ಸಫಾಯಿ ಕರ್ಮಚಾರಿಗಳಿಗೆ ಸವಲತ್ತು ವಿತರಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.