ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಡಾ. ಬಾಬು ಜಗಜೀವನರಾಮ್ ಸಾರ್ವಜನಿಕ ಆಸ್ಪತ್ರೆಯನ್ನು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕೋವಿಡ್ 19 ಸೆಂಟರ್ ಆಗಿ ಬದಲಾಯಿಸಲು ನಿರ್ಧರಿಸಲಾಗಿದೆ.
ಪಾದರಾಯನಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಬಿಬಿಎಂಪಿ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದರು. ಈ ಭಾಗಗಳಲ್ಲಿ ಮತ್ತೊಮ್ಮೆ ಆರೋಗ್ಯ ಸಮೀಕ್ಷೆ ನಡೆಸಿ, ಕೊರೊನಾ ಸೋಂಕಿನ ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜೆಜೆ ನಗರದ ಪಾಲಿಕೆ ಆಸ್ಪತ್ರೆಯಲ್ಲಿ 40 ಹಾಸಿಗೆಗಳ ಸಾಮರ್ಥ್ಯವಿದ್ದು, ಎಲ್ಲಾ ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಇದೆ. ಹೀಗಾಗಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ನೀಡುವಂತೆ ತಿಳಿಸಲಾಗಿದೆ.
ಈ ಆಸ್ಪತ್ರೆ ಕಳೆದ ಒಂದು ವರ್ಷದ ಹಿಂದೆಯಷ್ಟೇ ಸೇವೆಗೆ ಮುಕ್ತವಾಗಿದ್ದು, ಇಲ್ಲಿಯವರೆಗೆ ಸೋಂಕು ಪರೀಕ್ಷೆಗೆ ಮಾತ್ರ ಬಳಸಲಾಗಿತ್ತು. ಇದೀಗ ಎಲ್ಲಾ ಸೌಲಭ್ಯ ಇರುವುದರಿಂದ ಕೋವಿಡ್ ಚಿಕಿತ್ಸೆಗೂ ನೀಡಲಾಗಿದೆ. ಮಹಾದೇವಪುರ ವಲಯದ ಬಿದರಹಳ್ಳಿ ಪ್ರಾಥಮಿಕ ಕೇಂದ್ರದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಡಾ. ಸುಧಾ ಅವರಿಗೆ ಜಂಟಿ ಆಯುಕ್ತ ವೆಂಕಟಾಚಲಪತಿ ನೋಟಿಸ್ ನೀಡಿದ್ದಾರೆ.