ಬೆಂಗಳೂರು: ಕರ್ನಾಟಕ ರಾಜ್ಯವು ಅನೇಕ ಶ್ರೇಷ್ಠ ಕ್ರೀಡಾ ಪಟುಗಳನ್ನು ನಿರ್ಮಿಸಿದೆ. ವಿಶ್ವ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದ ಆಟಗಾರರಿಂದ ಸ್ಫೂರ್ತಿ ಪಡೆದು ಯುವಜನತೆ ಮುನ್ನಡೆಯಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು. ಪ್ರತಿಭಾನ್ವಿತ ಕ್ರೀಡಾಪಟುಗಳ ಪೋಷಕರನ್ನು ಅಭಿನಂದಿಸಲು ಕ್ರೀಡಾ ಭಾರತಿ ಆಯೋಜಿಸಿದ್ದ ಜೀಜಾ ಮಾತಾ ಸಮ್ಮಾನ್ ಸಮಾರೋಹ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಪಾಲರು, ದೇಶದ ಸ್ಥಾಪಿತ ಕ್ರೀಡೆಗಳ ಜೊತೆಗೆ ಸ್ಥಳೀಯ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಕ್ರೀಡಾ ಭಾರತಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಸಾಧನೆಗೈದ ಆಟಗಾರರ ಪಾಲಕರ ತ್ಯಾಗ, ಸಮರ್ಪಣಾ ಮನೋಭಾವ, ಪರಿಶ್ರಮವನ್ನು ಇಲ್ಲಿ ಗೌರವಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಆಟಗಾರರ ಪೋಷಕರಿಗೆ ಜೀಜಾ ಮಾತಾ ಸಮ್ಮಾನ್ ನೀಡಿ ಗೌರವಿಸುತ್ತಿರುವ ಕ್ರೀಡಾ ಭಾರತಿ ಸಂಸ್ಥಾನದ ಕಾರ್ಯ ಶ್ಲಾಘನೀಯ. ಜೀಜಾ ಮಾತೆಯು ವೀರ ಶಿವಾಜಿಯನ್ನು ಹೇಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನೈತಿಕ ಮೌಲ್ಯಗಳು ಮತ್ತು ಚಾರಿತ್ರ್ಯಗಳಿಂದ ತುಂಬಿದ ಛತ್ರಪತಿಯಾಗಲು ಶಕ್ತಗೊಳಿಸಿದರು ಎಂಬುದನ್ನು ಇತಿಹಾಸವು ನಮಗೆ ಹೇಳುತ್ತದೆ. ಸ್ವರಾಜ್ಯ ಸ್ಥಾಪನೆಯಲ್ಲಿ ಎಂದಿಗೂ ಎದೆಗುಂದದೆ, ಸವಾಲುಗಳನ್ನು ಎದುರಿಸಿ, ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಶಿವಾಜಿಯ ಮನಸ್ಸು ಸದಾ ಸ್ಫೂರ್ತಿದಾಯಕ ಎಂದು ತಿಳಿಸಿದರು.
ಮೋದಿಯಿಂದ ಕ್ರೀಡೆಗಳಿಗೆ ಸೌಲಭ್ಯ: ಕ್ರೀಡಾ ಚಟುವಟಿಕೆಗಳ ಮಹತ್ವದ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ದೇಶದ ಪ್ರಧಾನ ಮಂತ್ರಿಗಳು ತಮ್ಮ ದೈನಂದಿನ ಜೀವನದಲ್ಲಿ ಕ್ರೀಡೆ ಮತ್ತು ಆಟಗಳಿಗೆ ಆದ್ಯತೆ ನೀಡುವಂತೆ ಅನೇಕ ಸಂದರ್ಭಗಳಲ್ಲಿ ಜನರನ್ನು ಒತ್ತಾಯಿಸಿದ್ದಾರೆ ಮತ್ತು ದೇಶದಲ್ಲಿ ಕ್ರೀಡಾ ಸೌಲಭ್ಯಗಳನ್ನು ವಿಸ್ತರಿಸಲು ಮತ್ತು ಆಟಗಾರರ ನೈತಿಕತೆಯನ್ನು ಹೆಚ್ಚಿಸಲು ಕೆಲಸ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಫಿಟ್ ಇಂಡಿಯಾ ಆಂದೋಲನ ಕನಸಿನ ಕಾರ್ಯಕ್ರಮ: ಫಿಟ್ ಇಂಡಿಯಾ ಆಂದೋಲನ ಮತ್ತು ಖೇಲೋ ಇಂಡಿಯಾ ಕಾರ್ಯಕ್ರಮವು ಭಾರತದ ಪ್ರಧಾನ ಮಂತ್ರಿಯವರ ಕನಸಿನ ಕಾರ್ಯಕ್ರಮದ ಭಾಗವಾಗಿದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಅತಿದೊಡ್ಡ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಸ್ಪರ್ಧೆಯಾಗಿದೆ. ಈ ಕ್ರೀಡಾಕೂಟಗಳ ಉದ್ದೇಶವು ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳನ್ನು ಗುರುತಿಸುವುದು ಮತ್ತು ತರಬೇತಿ ನೀಡುವುದು, ವಾರ್ಷಿಕ ಕ್ರೀಡೆಗಳು ಮತ್ತು ಸ್ಪರ್ಧೆಗಳಲ್ಲಿ ಯುವಕರ ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಜೊತೆಗೆ ಎಲ್ಲರಿಗೂ ಕ್ರೀಡೆ ಮತ್ತು ಶ್ರೇಷ್ಠತೆಗಾಗಿ ಕ್ರೀಡೆಗಳನ್ನು ಉತ್ತೇಜಿಸುವುದಾಗಿದೆ ಎಂದರು.
ಯೋಜನೆಗಳನ್ನು ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಕ್ರೀಡಾ ಯೋಜನೆಗಳನ್ನು ಕ್ರೀಡಾಪಟುಗಳು ಸದಪಯೋಗ ಪಡೆದುಕೊಂಡು, ಮತ್ತಷ್ಟು ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಬೇಕು. ಕರ್ನಾಟಕ ರಾಜ್ಯವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿದೆ. ರಾಜ್ಯದಲ್ಲಿ ಕ್ರೀಡೆ ಮತ್ತು ಯೋಗ ವನ್ನು ಕಡ್ಡಾಯ ಪಠ್ಯಕ್ರಮದ ಭಾಗವಾಗಿ ಮಾಡಲಾಗಿದೆ. ಭಾರತವು ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿದೆ ಮತ್ತು ಇದು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ದೇಶವಾಗಿದ್ದು, ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ನೇರವಾಗಿ ಅದರ ಒಂದು ನೋಟವನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ಕ್ರೀಡಾ ವಾತಾವರಣವನ್ನು ಸೃಷ್ಟಿಸುವ ಅವಶ್ಯಕತೆ: ದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸಲು, ನಮ್ಮ ಯುವಕರು ಕ್ರೀಡೆಯಲ್ಲಿ ನಂಬಿಕೆಯನ್ನು ಹೊಂದುವುದು ಅವಶ್ಯಕವಾಗಿದೆ, ಕ್ರೀಡೆಯನ್ನು ತಮ್ಮ ವೃತ್ತಿಯನ್ನಾಗಿ ಮಾಡಲು ಪ್ರೋತ್ಸಾಹಿಸುವಂತಹ ವಾತಾವರಣವನ್ನು ಸೃಷ್ಟಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ರಾಜ್ಯಪಾಲರು ಸಹ ಖುದ್ದು ಕ್ರೀಡಾಪಟುಗಳು: ಕ್ರೀಡಾ ಭಾರತಿಯ ಅಖಿಲ ಭಾರತ ಕಾರ್ಯಾಧ್ಯಕ್ಷ ಮತ್ತು ಎಂ.ಪಿ. ವಿಧಾನಸಭಾ ಸದಸ್ಯರಾದ ಚೈತನ್ಯ ಕಶ್ಯಪ್ ಮಾತನಾಡಿ, ಕ್ರೀಡಾ ಭಾರತಿ, ಆರೋಗ್ಯಕರ ಭಾರತ - ಸ್ಮಾರ್ಟ್ ಇಂಡಿಯಾ ಗುರಿಯನ್ನು ಗಮನದಲ್ಲಿಟ್ಟುಕೊಂಡು, ಕ್ರೀಡೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಮತ್ತು ಕ್ರೀಡೆಗಳ ಮೂಲಕ ರಾಷ್ಟ್ರ ನಿರ್ಮಾಣದ ಉತ್ಸಾಹದಿಂದ ಕ್ರೀಡಾ ಜಗತ್ತಿನಲ್ಲಿ ತನ್ನ ಸಕ್ರಿಯ ಕೊಡುಗೆಯನ್ನು ನೀಡುತ್ತಿದೆ ಎಂದು ಹೇಳಿದರು.
ಜಿಜಾ ಮಾತೆಯ ಹೆಸರಲ್ಲಿ ಕ್ರೀಡಾ ಸಾಧಕರ ಪೋಷಕರಿಗೆ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ರಾಜ್ಯಪಾಲರು ಸಹ ಖುದ್ದು ಕ್ರೀಡಾಪಟುಗಳು. ಬಾಲ್ಯದಿಂದಲೇ ಅನೇಕ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ನಿರಂತರವಾಗಿ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಬಿರ್ಲಾ ಕಂಪನಿಯ ಸಾಮಾನ್ಯ ನೌಕರರಾಗಿದ್ದ ಇವರು, ತಮ್ಮ ಸಮಾಜ ಸೇವೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಕೇಂದ್ರ ಸಚಿವ ಹಾಗೂ ರಾಜ್ಯಪಾಲರಾಗಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಪುರಸ್ಕಾರ ಪಡೆದ ಕ್ರೀಡಾಪಟುಗಳು: ಕಾರ್ಯಕ್ರಮದಲ್ಲಿ ಕಬಡ್ಡಿ ಆಟಗಾರರಾದ ಬಿ.ಸಿ ರಮೇಶ್ ಮತ್ತು ಬಿ.ಸಿ ಸುರೇಶ್ ಅವರ ತಾಯಿ ಪದ್ಮಮ್ಮ , ಈಜುಗಾರ ಶ್ರೀ ಹರಿ ನಟರಾಜ್ ಅವರ ತಾಯಿ ಕಲ್ಯಾಣಿ ನಟರಾಜ್, ಅಥ್ಲೇಟಿಕ್ ಪ್ರಿಯಾ ಮೋಹನ್ ಅವರ ತಾಯಿ ಚಂದ್ರಕಲಾ, ಫೆನ್ಸಿಂಗ್ ಆಟಗಾರ್ತಿ ಲಕ್ಷ್ಮಿ ಅವರ ತಾಯಿ ಸುಮಂಗಲ ಭಟ್, ಅಥ್ಲೆಟಿಕ್ ವಿಜಯಕುಮಾರಿ ಅವರ ತಾಯಿ ಪ್ರೇಮ ಸೇರಿದಂತೆ ಮುಂತಾದವರಿಗೆ ಜಿಜಾ ಮಾತ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಈ ವೇಳೆ ಕ್ರೀಡಾ ಭಾರತಿ ಕರ್ನಾಟಕದ ಅಧ್ಯಕ್ಷ ಮುಕುಂದರಾವ್ ಕಿಲ್ಲೇಕರ್, ಪದ್ಮಶ್ರೀ ಪುರಸ್ಕೃತರು ಮತ್ತು ಕ್ರೀಡಾ ಭಾರತಿ ಕರ್ನಾಟಕದ ಉಪಾಧ್ಯಕ್ಷ ಕೆ.ವೈ.ವೆಂಕಟೇಶ್, ಭಾರತೀಯ ಕ್ರೀಡಾ ಅಕಾಡೆಮಿಯ ನಿವೃತ್ತ ಅಥ್ಲೆಟಿಕ್ ತರಬೇತುದಾರ ಮತ್ತು ಕ್ರೀಡಾ ಭಾರತಿ ದಕ್ಷಿಣ ಕರ್ನಾಟಕದ ಅಧ್ಯಕ್ಷ ಡಾ.ವೈ.ಎಸ್.ಲಕ್ಷ್ಮೀಶ್. ಮಾಜಿ ಶಾಸಕ ಹಾಗೂ ಕ್ರೀಡಾ ಭಾರತಿ ಕರ್ನಾಟಕದ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:'ಅರಿಯದೆ ನಿಷೇಧಿತ ವಸ್ತು ಸೇವಿಸಿದ್ದೆ..': ಜಿಮ್ನಾಸ್ಟ್ ದೀಪಾ ಕರ್ಮಾಕರ್ ತಪ್ಪೊಪ್ಪಿಗೆ