ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಾವಳಿ ನಡೆಸಲು ಜಿಂದಾಲ್ ಫುಟ್ಬಾಲ್ ಕ್ಲಬ್ಗೆ ಅವಕಾಶ ನೀಡಿರುವುದು ನಿಯಮ ಬಾಹಿರವಾಗಿದ್ದು, ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.
ಅರ್ಜುನ ಪ್ರಶಸ್ತಿ ವಿಜೇತರಾದ ಅಶ್ವಿನಿ ನಾಚಪ್ಪ ಸೇರಿದಂತೆ 17 ಮಂದಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ತರಬೇತುದಾರರು ಹಾಗೂ 33 ಮಂದಿ ಕ್ರೀಡಾಪಟುಗಳು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಒಳಗೊಂಡ ವಿಭಾಗೀಯ ಪೀಠ, ಖಾಸಗಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು, ಪಂದ್ಯ ನಡೆಸಲು ಜಿಂದಾಲ್ಗೆ ಅವಕಾಶ ನೀಡಿರುವುದು ತಪ್ಪು ಎಂದು ಅಭಿಪ್ರಾಯಪಟ್ಟಿದೆ.
ಇಂದು ರಾಜ್ಯ ಸರ್ಕಾರದ ಪರ ವಕೀಲರು ವರದಿ ನೀಡುವ ಸಂದರ್ಭದಲ್ಲಿ ಜಿಂದಾಲ್ ಫುಟ್ಬಾಲ್ ಕ್ಲಬ್ಗೆ ಅನುಮತಿ ನೀಡಿರುವುದು ಕಾನೂನು ಬಾಹಿರವಾಗಿದ್ದು, ನಿಯಮ ಉಲ್ಲಂಘಿಸಿರುವರ ವಿರುದ್ಧ ತನಿಖೆ ಮಾಡಬೇಕು. ರಾಜ್ಯದ ಎಲ್ಲಾ ಕ್ರೀಡಾಂಗಣಗಳನ್ನು ತಾತ್ಕಾಲಿಕವಾಗಿ ಮಾತ್ರ ಬಳಕೆ ಮಾಡುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ. ಹೀಗಾಗಿ ಸುಪ್ರಿಂ ಕೋರ್ಟ್ ಆದೇಶದಂತೆ ನೀತಿ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿ ಸೆಪ್ಟೆಂಬರ್ 30ರೊಳಗೆ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿದೆ.