ದೇವನಹಳ್ಳಿ: ಬೇರೆ ಹುಡುಗನೊಂದಿಗೆ ಹಸಮಣೆ ಏರಿದ ಪ್ರೇಯಸಿಗೆ ಭಗ್ನ ಪ್ರೇಮಿಯೊಬ್ಬ 20 ಬಾರಿ ಚಾಕುವಿನಿಂದ ಇರಿದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಸೌಮ್ಯ (23) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದು, ಚಾಕು ಇರಿದು ವಿಷ ಕುಡಿದ ಸುಬ್ರಮಣ್ಯಗೆ ದೇವನಹಳ್ಳಿ ಆಕಾಶ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗೆಳತಿಗೆ ಇರಿದ ಪ್ರೇಮಿ: ಕೊಲೆಯಾದ ಸೌಮ್ಯ ಮತ್ತು ಆರೋಪಿ ಸುಬ್ರಮಣ್ಯ ಬೆಂಗಳೂರಿನ ನಾಗವಾರದ ಕಾಫಿ ಡೇನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಕೆಲ ತಿಂಗಳ ಹಿಂದೆ ಕೆಲಸ ಬಿಟ್ಪಿದ್ದ ಸೌಮ್ಯ, ಪ್ರಿಯಕರ ಸುಬ್ರಮಣ್ಯನೊಂದಿಗೆ ಅಂತರ ಕಾಯ್ದುಕೊಂಡಿದ್ದಳು. 15 ದಿನಗಳ ಹಿಂದೆ ಬೇರೆ ಹುಡುಗನ ಜೊತೆ ಮದುವೆಯಾಗಿದ್ದಳಂತೆ. ಪ್ರೀತಿಸಿದ ಹುಡುಗಿ ಬೇರೊಬ್ಬ ಹುಡುಗನೊಂದಿಗೆ ಮದುವೆಯಾಗಿದ್ದಕ್ಕೆ ಸುಬ್ರಮಣ್ಯ ಕೋಪಗೊಂಡಿದ್ದ ಎನ್ನಲಾಗುತ್ತಿದೆ.
ನಿನ್ನೆ ಸೌಮ್ಯ ತವರಿಗೆ ಬಂದಿರುವ ವಿಷಯ ಸುಬ್ರಮಣ್ಯನಿಗೆ ತಿಳಿದಿತ್ತು. ನೇರ ಮನೆಗೆ ಬಂದ ಸುಬ್ರಮಣ್ಯ, ಆಕೆಗೆ ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಇರಿದು ಪರಾರಿಯಾಗಿದ್ದ. ಸೌಮ್ಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದರು. ರಕ್ತದ ಮಡುವಿನಲ್ಲಿ ಓದ್ದಾಡುತ್ತಿದ್ದ ಸೌಮ್ಯಳನ್ನ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾಳೆ.
ಪ್ರಿಯತಮೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಸುಬ್ರಮಣ್ಯ ನಂತರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಮಲಗಿದ್ದ ಹುಡುಗಿ ಮೇಲೆ ಆ್ಯಸಿಡ್ ಎರಚಿದ ಭಗ್ನ ಪ್ರೇಮಿ.. ಆಸ್ಪತ್ರೆಯಲ್ಲಿ ಬಾಲಕಿ ನರಳಾಟ)