ಬೆಂಗಳೂರು: 45 ದಿನಗಳ ಕಾಲ ರಾಜ್ಯದ್ಯಂತ ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆಯಲ್ಲಿ ಮೂರು ಹಂತದ ಕಾಲ್ನಡಿಗೆ ಯಶಸ್ವಿಯಾಗಿ ಪೂರ್ಣವಾಗಿದ್ದು, ರಾಜ್ಯ ರಾಜಧಾನಿಯಲ್ಲೂ ಐದು ದಿನಗಳ ಕಾಲ ಪಾದಯಾತ್ರೆ ನಡೆಸುವುದಾಗಿ ಜನತಾದಳ (ಸಂಯುಕ್ತ) ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಲಾರದಿಂದ ಪ್ರಾರಂಭವಾಗಿ ಬೆಂಗಳೂರಿನವರೆಗೆ, ದಾವಣಗೆರೆಯ (ಜೆ.ಹೆಚ್.ಪಟೇಲ್‌ರ ಪುಣ್ಯಭೂಮಿ) ಕಾರಿಗನೂರುನಿಂದ ಪ್ರಾರಂಭವಾಗಿ ಕೂಡಲಸಂಗಮದವರೆಗೆ ಸುಮಾರು 650ಕ್ಕೂ ಹೆಚ್ಚು ಕಿ.ಮೀ. ದೂರವನ್ನು ಕ್ರಮಿಸಿದ್ದಾಗಿದೆ.
ಇದೀಗ ಬೆಂಗಳೂರು ಮಹಾನಗರ ಪಾದಯಾತ್ರೆಯನ್ನು 45 ದಿನಗಳ ಕಾಲ ನಿಗದಿಪಡಿಸಿದ್ದು, ಇದರ ಮೊದಲ ಹಂತಕ್ಕೆ ನಾಳೆ ಬೆಳಗ್ಗೆ 10 ಗಂಟೆಗೆ ನಗರ ದೇವತೆ ಅಣ್ಣಮ್ಮ ದೇವಿಗೆ ಪೂಜೆ ಸಲ್ಲಿಸಿ ದೇವಸ್ಥಾನದಿಂದ ಪ್ರಾರಂಭವಾಗಿ ಐದು ದಿನಗಳ ಪಾದಯಾತ್ರೆಯನ್ನು ನಡೆಸಲಿದ್ದೇವೆ. ಬೆಂಗಳೂರು ನಗರ ಜನತೆಯ ಮನಃ ಪರಿವರ್ತನಾ ಉದ್ದೇಶದಿಂದ ಕೂಡಿದ ಪಾದಯಾತ್ರೆ ಇದಾಗಿದೆ ಎಂದರು.
ಎಲ್ಲೆಲ್ಲಿ ಪಾದಯಾತ್ರೆ:
ಜನವರಿ 30: ಅಣ್ಣಮ್ಮ ದೇವಿ ದೇವಸ್ಥಾನದಿಂದ - ರಾಜರಾಜೇಶ್ವರಿನಗರ
ಜನವರಿ 31: ರಾಜರಾಜೇಶ್ವರಿ ನಗರದಿಂದ – ದಾಸರಹಳ್ಳಿ (ಪೀಣ್ಯ ದಾಸರಹಳ್ಳಿ)
ಫೆಬ್ರವರಿ 1: ದಾಸರಹಳ್ಳಿಯಿಂದ – ಯಲಹಂಕ
ಫೆಬ್ರವರಿ 2: ಯಲಹಂಕದಿಂದ - ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‌ವರೆಗೆ
ಫೆಬ್ರವರಿ 3: ಮಾನ್ಯತಾ ಟೆಕ್ ಪಾರ್ಕ್‌ನಿಂದ -ಜನತಾದಳ (ಸಂಯುಕ್ತ) ಪಕ್ಷದ ಕೇಂದ್ರ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಮಹಿಮಾ ಪಟೇಲ್ ಮಾಹಿತಿ ನೀಡಿದರು.
ಜೆಡಿಯು ರಾಜ್ಯ ಘಟಕದ ಸಭೆ:
ರಾಜಾಜಿನಗರದ ಮೋದಿ ರಸ್ತೆಯ ಕೆ.ಎಲ್.ಪಾರ್ಡಿ ಹಾಲ್ನಲ್ಲಿ ಜೆಡಿ (ಯು) ರಾಜ್ಯ ಘಟಕ ಸದಸ್ಯರ ಸಭೆಯನ್ನು ನಡೆಸಿದ್ದು, ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜೆಡಿ(ಯು) ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.