ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಳೆಯೇ ಮುಖ್ಯಮಂತ್ರಿಯಾಗುವುದಾದರೆ ಜೆಡಿಎಸ್ನ 19 ಶಾಸಕರೂ ಬೆಂಬಲ ಕೊಡುತ್ತೇವೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಓಪನ್ ಆಫರ್ ಕೊಟ್ಟಿದ್ದಾರೆ. ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಎಷ್ಟು ಜನ ಸಿಎಂ ಆಗುತ್ತಾರೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸುವ ಸಂಬಂಧ ಕರೆದಿದ್ದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಎಷ್ಟು ಜನ ಮುಖ್ಯಮಂತ್ರಿಗಳಾಗುತ್ತಾರೋ ಗೊತ್ತಿಲ್ಲ. ಇದನ್ನು ನೋಡಿದರೆ ಈ ಸರ್ಕಾರಕ್ಕೆ ಟಿಸಿಎಂ (ಟೆಂಪರವರಿ ಮುಖ್ಯಮಂತ್ರಿ) ಹಾಗೂ ಡಿಸಿಎಂ (ಡೂಪ್ಲಿಕೇಟ್ ಮುಖ್ಯಮಂತ್ರಿ) ಸರ್ಕಾರವೆಂದು ಕರೆಯಬಹುದು ಎಂದು ಟೀಕಿಸಿದರು.
ಯಾವ ರೀತಿ ರೈತರನ್ನು ಉಳಿಸುತ್ತೀರಾ, ಇದನ್ನು ರಾಜ್ಯ ಸರ್ಕಾರವನ್ನು ಕೇಳುತ್ತೇನೆ. ವಿರೋಧ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡಬೇಡಿ. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಡೈವರ್ಟ್ ಮಾಡಬೇಡಿ ಎಂದು ಹೇಳಿದರು. ಬಿಜೆಪಿ ಲೀಡರ್ ಲೇಸ್, ಜೆಡಿಎಸ್ ಪೀಪಲ್ ಲೇಸ್ ಅಂತೀರಾ?. ಕಲಬುರಗಿ ಜನಕ್ಕೆ ನಿಮ್ಮ ಕೊಡುಗೆ ಎನು? ಎಂದು ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ ಹೆಚ್ಡಿಕೆ, ಲೋಕಸಭೆ ಚುನಾವಣೆ ಮುಗಿಯಲಿ ತೋರಿಸುತ್ತೇವೆ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಸಿಎಂ ವಿರುದ್ಧ ಟೀಕೆ: ಗೃಹಲಕ್ಷ್ಮಿ ಯೋಜನೆಯಲ್ಲಿ ಎಷ್ಟು ಮಹಿಳೆಯರಿಗೆ ಹಣ ಕೊಟ್ಟಿದ್ದೀರಾ? ಅಕ್ಕಿಯದ್ದು ಬೇರೆ ಕಥೆ, ಮಂತ್ರಿಗಳು ಸಭೆಗೆ ಹೋದರೆ ಜನರು ಹಣ ಬೇಡ, ಅಕ್ಕಿ ಬೇಕು ಎಂದು ಕೇಳುತ್ತಿದ್ದಾರೆ ಎಂದ ಕುಮಾರಸ್ವಾಮಿ, ಗದಗ ಜಿಲ್ಲೆಗೆ ಮೊನ್ನೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರು ಡ್ಯಾನ್ಸ್ ಮಾಡಿ ಬಂದಿದ್ದಾರೆ. ಆ ಜಿಲ್ಲೆಯಲ್ಲೂ ಬರ ಇದೆ. ಏನು ಪರಿಹಾರ ಕೊಟ್ಟು ಬಂದಿದ್ದೀರಿ. ಗ್ಯಾರಂಟಿ ಕಾರ್ಯಕ್ರಮಕ್ಕಾಗಿ ಕೇಂದ್ರದ ಯೋಜನೆ ನಿಲ್ಲಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ರೈತರು ಬೆಳೆದ ಭತ್ತ ಒಣಗಿ ಹೋಗಿದೆ. ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಸಂಪೂರ್ಣ ನಾಶವಾಗಿದೆ ಎಂದು ವಿವರಿಸಿದರು.
ಮುಂಗಾರು ಕೊರತೆಯಿಂದ 60 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ. ಜಿಲ್ಲಾ ಪ್ರವಾಸ ಮಾಡಿ ಸಿಎಂ ಸಚಿವರು ಸಹ ವರದಿ ಕೊಟ್ಟಿದ್ದಾರೆ. ಬರ ಪರಿಹಾರ ಕೊಡಿಸಿ ಎಂದು ಬಿಜೆಪಿಯವರಿಗೆ ಸಿಎಂ ಹೇಳಿದ್ದಾರೆ. ಕೇಂದ್ರ ಬರ ಅಧ್ಯಯನ ತಂಡ ಕೂಡ ವರದಿ ಪಡೆದು ಹೋಗಿದೆ. 17 ಸಾವಿರ ಕೋಟಿ ರೂ. ಬರ ಪರಿಹಾರ ಹಣಕ್ಕೆ ಮನವಿ ಮಾಡಿದ್ದಾರೆ. ಇವರು ಕೇಳಿದಷ್ಟು ನೆರವು ರಾಜ್ಯದಲ್ಲಿ ಯಾವತ್ತೂ ಬಂದಿಲ್ಲ ಎಂದು ಹೇಳಿದರು.
ನಾವೆಲ್ಲರೂ ಜನರ ಗುಲಾಮರು: ಇಷ್ಟು ದೊಡ್ಡ ಮೊತ್ತದ ನೆರವನ್ನು ಯಾವ ರಾಜ್ಯಗಳು ಕೇಳಿಲ್ಲ. ಪರಿಹಾರ ಕೇಳುವುದಕ್ಕೂ ಹಲವು ನಿಯಮಗಳೀವೆ. ಅದರ ಗಂಭೀರತೆ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡುತ್ತಿದೆ. ವಿದ್ಯುತ್ ವಿಚಾರ, ಅಕ್ಕಿ ವಿಚಾರದಲ್ಲೂ ಕೇಂದ್ರದ ಕಡೆ ಬೊಟ್ಟು ಮಾಡುತ್ತಾರೆ. ನಾವು ಗುಲಾಮರಲ್ಲ ಅಂತ ಕಾಂಗ್ರೆಸ್ ನವರರು ಪದೇ ಪದೇ ಹೇಳುತ್ತಾರೆ. ನಾವೆಲ್ಲರೂ ಜನರ ಗುಲಾಮರು ಅನ್ನುವುದನ್ನು ಮರೆಯಬಾರದು. ರಾಜ್ಯದಲ್ಲಿ ಕಷ್ಟದ ಪರಿಸ್ಥಿತಿ ಇರುವಾಗ, ಮುಖ್ಯಮಂತ್ರಿಯಾದರು ಹೇಗೆಲ್ಲಾ ಮಾತನಾಡುತ್ತಾರೆ ಅನ್ನುವುದನ್ನು ನಾನು ನೋಡಿದ್ದೇನೆ ಎಂದು ಕಿಡಿಕಾರಿದರು.
ಕೇಂದ್ರದ ಕಡೆ ಬೊಟ್ಟು ಮಾಡ್ತಾರೆಂದು ಟೀಕೆ: ಪ್ರಾರಂಭದ ಹಂತದಲ್ಲಿ ಸುಮಾರು 4 ಸಾವಿರ ಕೋಟಿ ರೂ. ಕೇಂದ್ರ ಕೊಡಬೇಕೆಂದು ಮನವಿ ಮಾಡಿದ್ದರು. ಮೂವರು ಮಂತ್ರಿಗಳು ಕೇಂದ್ರ ಸಚಿವರನ್ನು ಭೇಟಿಯಾಗಲು ಹೋಗಿದ್ದರು. ಬಳಿಕ, ಕೇಂದ್ರ ಸಚಿವರು ಸಿಗದೇ ಕಾರ್ಯದರ್ಶಿಗಳನ್ನು ಭೇಟಿಯಾಗಿದ್ದೇವೆ ಅಂದಿದ್ದಾರೆ. ಕೇಂದ್ರ ಸದಚಿವರು ಸಿಗುತ್ತಿಲ್ಲವೆಂದು ಹೇಳುತ್ತಾರೆ ಎಂದು ಬಿಜೆಪಿ ಸ್ನೇಹಿತರಿಗೆ ಬರ ಪ್ರವಾಸ ಮಾಡುವ ಬದಲು ಪ್ರಧಾನಿ ಮೋದಿ ಅವರ ಭೇಟಿಗೆ ಅವಕಾಶ ಮಾಡಿಸಿಕೊಡಿ ಅಂತ ಸಿಎಂ ಕೇಳಿದ್ದಾರೆ. ಕಳೆದ ಐದೂವರೆ ತಿಂಗಳಲ್ಲಿ ಸಿಎಂ ಕೇಂದ್ರ ಸರ್ಕಾರ ಕಡೆ ಬೊಟ್ಟು ಮಾಡ್ತಾರೆ ಎಂದು ಟೀಕಾಪ್ರಹಾರ ನಡೆಸಿದರು.
ಕೇಂದ್ರ ಸರ್ಕಾರ ವಿರುದ್ಧ ಮಾತನಾಡಿ ಯಾವ ರೀತಿ ಸಾಧನೆ ಮಾಡುತ್ತೀರಾ?. 324 ಕೋಟಿ ರೂ. ಹಣವನ್ನು ಬರ ಪರಿಹಾರ ಜಿಲ್ಲೆವಾರು ಕೊಟ್ಟಿದ್ದೀರಾ. ಈ ಪರಿಹಾರವನ್ನು ಯಾವುದಕ್ಕೆ ಬಳಸುತ್ತೀರಾ? ರೈತರು ಹಳ್ಳಿಯಿಂದ ಗುಳೆ ಹೋಗುತ್ತಿದ್ದಾರೆ. ರೈತ ವಿಮೆ ಮಾರ್ಗಸೂಚಿ ಬದಲಾವಣೆ ಮಾಡಬೇಕು. 100ಕ್ಕೆ 65 ಜನಕ್ಕೆ ಬೆಳೆ ಪರಿಹಾರ ಸಿಕ್ಕಿಲ್ಲ. ನುಡಿದಂತೆ ನಡೆದಿದ್ದೇವೆ ಅಂತೀರಲ್ಲಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದ ನಾಯಕನ ಮಾಡಿಕೊಂಡಿಲ್ಲ ಅಂತೀರಾ. ಇಲ್ಲಿ ಸರ್ಕಾರವೇ ಇಲ್ಲವೇ ಇಲ್ಲ. ತೆಲಂಗಾಣದಲ್ಲಿ ಚುನಾವಣೆ ಭಾಷಣ ಮಾಡುತ್ತ ನಮ್ಮ ರಾಜ್ಯದಲ್ಲಿ ದಿನಕ್ಕೆ ಐದು ಗಂಟೆ ವಿದ್ಯುತ್ ಕೊಡುತ್ತಿದ್ದೇವೆ ಎಂದು ಡಿಸಿಎಂ ಹೇಳಿದ್ದಾರೆ. ಆದರೆ, ವಿದ್ಯುತ್ ಉತ್ಪಾದನೆ ಕುಠಿತವಾಗಿದೆ. ಏನಾಗಿದೆ, ಕಲ್ಲಿದ್ದಲು ಖರೀದಿ ಯಾಕೆ ಮಾಡಿಲ್ಲ. ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಜನರಿಗೆ ಯಾವ ರೀತಿ ಪರಿಹಾರ ಕೊಡ್ತೀರಾ? ಎಂದು ಪ್ರಶ್ನಿಸಿದರು.
ಆಪರೇಷನ್ ಯತ್ನ ಆರೋಪ: ಜಿ.ಟಿ.ದೇವೇಗೌಡರನ್ನು ಮಂತ್ರಿ ಮಾಡುತ್ತೇನೆ. ಮಗನಿಗೆ ಏನೋ ಮಾಡುತ್ತೇನೆ ಅಂತಾರೆ. ಕರೆಮ್ಮ ಮೀಟಿಂಗ್ಗೆ ಹೋದರೆ ಬನ್ನಿ ಅಂತಾರೆ, ನಮ್ಮ ಶಾಸಕರಿಗೆ ಆಪರೇಷನ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅವರ (ಕಾಂಗ್ರೆಸ್) ಶಾಸಕರಿಗೆ ಅನುದಾನ ನೀಡುವುದಕ್ಕೆ ಆಗುವುದಿಲ್ಲ. ನಮ್ಮ ಶಾಸಕರಿಗೆ ಏನು ಮಾಡುತ್ತೀರಾ ಎಂದು ಗುಡುಗಿದರು.