ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿಯ ಪಾಪದ ಕೊಡ ತುಂಬಿದೆ. ಕಾಂಗ್ರೆಸ್ನವರು ಯಾವ ಜೋಡೋ ಆದರೂ ಮಾಡಿಕೊಳ್ಳಲಿ, ಬಿಜೆಪಿಯವರು ಯಾವ ಸಂಕಲ್ಪ ಯಾತ್ರೆಯಾದರೂ ಮಾಡಿಕೊಳ್ಳಲಿ. 2023ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಬಸವನಗುಡಿಯಲ್ಲಿ ಇಂದು ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದ ನಂತರ ಬಹಿರಂಗ ಸಭೆಯಲ್ಲಿ ಮಾತನಾಡುತ್ತಾ, ಬೆಂಗಳೂರಿನಲ್ಲಿ ಜೆಡಿಎಸ್ 10 ರಿಂದ 12 ಸ್ಥಾನ ಗಳಿಸಲೇಬೇಕು. ಹಾಗಾಗಿ, ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು. ಚುನಾವಣೆಯಲ್ಲಿ ಜನರಿಂದ ಲೂಟಿ ಮಾಡಿದ ಹಣವನ್ನು ಹಂಚಲು ಬರುತ್ತಾರೆ. ಒಂದು ಮತಕ್ಕೆ 2000, ಮತ್ತೆ ಕುಕ್ಕರ್ ಅಂತಾ ಬರ್ತಾರೆ. ಇದೆಲ್ಲ ಹಣ ರಾಜ್ಯದ ಜನರಿಂದ ಲೂಟಿ ಮಾಡಿರುವ ಹಣ. ಆದರೆ, ನಾವು ಯಾರು ದುಡ್ಡು ಲೂಟಿ ಹೊಡೆದಿಲ್ಲ ಎಂದರು.
ಭಾರತ್ ಜೋಡೋದಿಂದ ಜನರ ಸಮಸ್ಯೆಗಳು ಅರ್ಥ ಆಗಲ್ಲ. ಇವಾಗ ಏನೋ ಕಾಂಗ್ರೆಸ್ ನಾಯಕರು ಪಟ್ಟಿ ಮಾಡ್ತಾರಂತೆ. ಅವರಿಂದ ಯಾವ ಜನರ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಆಗುವುದಿಲ್ಲ. ಬಿಜೆಪಿ ಸರ್ಕಾರ ಸಹ ಏನೂ ಮಾಡಿಲ್ಲ. ಕೆಂಪೇಗೌಡರ ಹೆಸರಿನಲ್ಲಿ ಪ್ರವಾಸ ತಾಣ ಮಾಡಲು ಹೊರಟಿದ್ದಾರೆ. ಆಂಧ್ರ ಪ್ರದೇಶದಲ್ಲಿ ಅಮರಾವತಿ ಕಟ್ಟುತ್ತೇವೆ ಅಂತ ಹೇಳಿ ಪ್ರಧಾನಿ ನರೇಂದ್ರ ಮೋದಿ ಮಣ್ಣು ತೆಗೆದುಕೊಂಡು ಬಂದಿದ್ದರು ಎಂದು ವಾಗ್ದಾಳಿ ನಡೆಸಿದರು.
ಅತ್ಯಾಧುನಿಕ ಶಿಕ್ಷಣ ನೀಡುವ ಸಂಕಲ್ಪ: ಇಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗಿದೆ. ಪವಿತ್ರ ದಿನ ಅಂತ ಇಂದು ಚಾಲನೆ ಕೊಡಲಾಗಿದೆ. ಪಂಚರತ್ನ ಕಾರ್ಯಕ್ರಮ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಬಡವ, ಶ್ರೀಮಂತ ಅಂತ ತಾರತಮ್ಯ ಇಲ್ಲದೆ ಅತ್ಯಾಧುನಿಕ ಶಿಕ್ಷಣ ಕೊಡಿಸಬೇಕು. ಗ್ರಾಮ ಪಂಚಾಯತಿ, ಪ್ರತಿ ವಾರ್ಡ್ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಉಚಿತ ಶಿಕ್ಷಣ ಸರ್ಕಾರ ಕೊಡಬೇಕು. ಕೊರೊನಾ ಸಮಯದಲ್ಲಿ ಶಾಲೆ ನಡೆಯದೇ ಇದ್ದರೂ ಖಾಸಗಿ ಶಿಕ್ಷಣ ಸಂಸ್ಥೆಯವರು ಫೀಸ್ ಕಟ್ಟಲೇ ಬೇಕು ಅಂತ ಒತ್ತಡ ಹಾಕಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಕಾರ್ಯಕ್ರಮ ರೂಪಿಸಲಾಗಿದೆ. ವೃತ್ತಿ ಬದುಕಿಗೆ ಮಕ್ಕಳಿಗೆ ಇಂಗ್ಲಿಷ್ ಕೂಡ ಅನಿವಾರ್ಯವಾಗಿದೆ ಎಂದು ಹೇಳಿದರು.
ಕೆಂಪೇಗೌಡ ಹೆಸರಿನಲ್ಲಿ ವಿಶ್ವವಿದ್ಯಾಲಯ: ನಾನು ಮಕ್ಕಳಿಗೆ ಉತ್ತಮ ಶಿಕ್ಷಣ ಮಾಡಬೇಕು. ಮಾಗಡಿಯಲ್ಲಿ ಕೆಂಪೇಗೌಡರ ಹೆಸರಲ್ಲಿ ವಿವಿ ಪ್ರಾರಂಭ ಮಾಡಬೇಕು. ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು. ಜನರ ಬದುಕು ಕಟ್ಟಿಕೊಡಬೇಕಿದೆ. ಮಾರ್ಚ್ 15ರ ವರೆಗೆ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮಾಡಲಾಗುತ್ತದೆ. ಈ ಮೂಲಕ ಒಂದು ಅವಕಾಶ ಕೊಡಿ ಅಂತ ಕೇಳುತ್ತಿದ್ದೇವೆ ಎಂದು ತಿಳಿಸಿದರು.
ಹಾಗೆಯೇ ಎಲ್ಲರಿಗೂ ಉಚಿತ ಚಿಕಿತ್ಸೆ ಸಿಗಬೇಕು. ಕಾನ್ಸರ್, ಡಯಾಲಿಸಿಸ್ ಗೆ ಲಕ್ಷಾಂತರ ಹಣ ಕಟ್ಟಬೇಕು. ಕೊರೊನಾ ಸಮಯದಲ್ಲಿ ಎಷ್ಟು ಸಾವು ನೋವು ಆಗಿರೋದನ್ನು ನೋಡಿದ್ದೇವೆ. ಹೀಗಾಗಿ 6,000 ಗ್ರಾಮ ಪಂಚಾಯತಿಯಲ್ಲಿ ದೊಡ್ಡ ಆಸ್ಪತ್ರೆ ಕಟ್ಟಬೇಕು. ಪ್ರತಿ ಆಸ್ಪತ್ರೆಯಲ್ಲಿ ವೈದ್ಯರು, ಲ್ಯಾಬ್ ಹೀಗೆ ಎಲ್ಲವೂ ಇರಬೇಕು. ಗ್ರಾಮ ಮಟ್ಟದಲ್ಲಿ ಹೆರಿಗೆಗೆ ಬೇಕಾದ ಸೌಲಭ್ಯ ಸಿಗಬೇಕೆಂಬ ಗುರಿ ನಮ್ಮದಾಗಿದೆ ಎಂದರು.
ಮಹಿಳೆಯರಿಗೆ ಮತ್ತು ಯುವಕರಿಗೆ ಉದ್ಯೋಗ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ನೀಡುವ ಯೋಜನೆ ಹಾಕಿದ್ದೆ. ಆದರೆ, ಬಿಜೆಪಿ ಸರ್ಕಾರ ಅದನ್ನು ನಿಲ್ಲಿಸಿದೆ. ಮನೆ ಇಲ್ಲದವರಿಗೆ ಮನೆ ಕಟ್ಟುವ ಕಾರ್ಯಕ್ರಮ ಹಾಕಿಕೊಂಡಿದ್ದೆ. ಆದರೆ, ನಾನು ಆಗ ಬೇರೆಯವರ ಹಂಗಿನಲ್ಲಿ ಇದ್ದೆ. ಹಾಗಾಗಿ ಈ ಯೋಜನೆ ಆಗಲಿಲ್ಲ. ನಾನು ಮಾಡಿದ ಯೋಜನೆಯನ್ನು ಮುಂದೆ ಬಂದ ಸರ್ಕಾರಗಳು ಗಾಳಿಗೆ ತೂರಿದವು. ನನ್ನ ಮುಂದಿನ ಯೋಜನೆಯಲ್ಲಿ ಮಹಿಳೆಯರು ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶವಿದೆ ಎಂದು ವಿವರಿಸಿದರು.
ರೈತರಿಗಾಗಿಯೂ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ವರ್ಷ ಭತ್ತದ ಬೆಳೆ ಕಡಿಮೆ ಉತ್ಪಾದನೆ ಆಗಿದೆ. ರೈತರಿಗೆ ಬಿತ್ತನೆಗೆ ಸರ್ಕಾರದಿಂದಲೇ ಸಹಾಯ ಆಗಬೇಕು. ರೈತ ಚೈತನ್ಯ ಕಾರ್ಯಕ್ರಮದಲ್ಲಿ ಅವರಿಗೆ ಅನುಕೂಲ ಆಗುವಂತೆ ಮಾಡಲಾಗಿದೆ. ರೈತ ಬಂಧು ಅಂತ ತೆಲಂಗಾಣದಲ್ಲಿ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಗವಿ ಗಂಗಾಧರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಪಂಚರತ್ನ ರಥಯಾತ್ರೆಗೆ ಹೆಚ್‌ಡಿಕೆ ಚಾಲನೆ