ಬೆಂಗಳೂರು: ವಿಧಾನಸೌಧದಿಂದ ರಾಜಭವನದವರೆಗೆ ಕಾಲ್ನಡಿಗೆಯ ಮೂಲಕ ಇಂದು ಮಧ್ಯಾಹ್ನ 3 ಗಂಟೆಗೆ ತೆರಳಿ ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಮಹದಾಯಿ ಯೋಜನೆಯ ಅನುಮೋದನೆಗಾಗಿ ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ.
ಈ ಬಗ್ಗೆ ಜೆಪಿ ಭವನದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ವಿಚಾರವಾಗಿ ಇಂದು ಮಧ್ಯಾಹ್ನ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಕೇಂದ್ರ ಸರ್ಕಾರ ನಮಗೆ ತೋರಿಸುತ್ತಿರುವ ಧೋರಣೆ ವಿರುದ್ಧ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನೀರಾವರಿ ಬಗ್ಗೆ ಅರಿವಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರದಿಂದ ನೋಟಿಫಿಕೇಷನ್ ಆಗಿಲ್ಲ. ಮೇಕೆದಾಟಿನ ವಿಚಾರದಲ್ಲಿಯೂ ಬ್ಯಾಲೆನ್ಸಿಂಗ್ ರಿಸರ್ವ್ ಮಾಡೋದಿಕ್ಕೆ ಸಾಧ್ಯವಾಗಿಲ್ಲ. ಚರ್ಚೆ ಮಾಡುತ್ತಲೇ ಇದ್ದೇವೆ, ಆದರೆ ಆಗ್ತಿಲ್ಲ. ರಾಜ್ಯದ ಜನತೆಯ ಬಗ್ಗೆ ಕೇಂದ್ರ ಚೆಲ್ಲಾಟವಾಗುತ್ತಿದೆ ಎಂದು ಕಿಡಿಕಾರಿದರು.
ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಕೊಡುತ್ತೇವೆ. ಪ್ರಧಾನಿಗಳಿಗೂ ಆ ಕಾಪಿ ಕಳಿಸುತ್ತೇವೆ. ಮೊದಲನೇ ಹಂತದಲ್ಲಿ ನಮ್ಮ ಪಕ್ಷದ ವತಿಯಿಂದ ಇಂದು ಪ್ರಸ್ತಾವನೆ ಕೊಡುತ್ತೇವೆ. ಕೇಂದ್ರ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಅನ್ನೋದನ್ನು ನೋಡಿಕೊಂಡು ನಂತರ ನಮ್ಮ ಮುಂದಿನ ನಡೆ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ವಿಚಾರ: ನಮ್ಮ ಪರವೇ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಈಗ ಸಿಎಂ ಆಗಿದ್ದಾರೆ. ಅವರಿಗೆ ನೀರಾವರಿ ಸಚಿವರಾಗಿ ತುಂಬಾ ಅನುಭವವಿದೆ. ಈ ಮೂರು ಯೋಜನೆ ಪರವಾಗಿ ರಾಜ್ಯದ ಪರವಾಗಿ ಕೇಂದ್ರ ನಿರ್ಧಾರ ಮಾಡಬೇಕು ಎಂದರು. ನಿರಂತರವಾಗಿ ನಮ್ಮ ಹೋರಾಟ ರಾಜ್ಯದ ನೀರಾವರಿ ಪರ ಇರುತ್ತದೆ. ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸುವುದಿಲ್ಲ. ನಾಡಿನ ನೀರಾವರಿ ವಿಚಾರದಲ್ಲಿ, ಉತ್ತರ ಕರ್ನಾಟಕ ಭಾಗಕ್ಕೆ ಮತ್ತು ಯುಕೆಪಿ ಯೋಜನೆಗೆ ದೇವೇಗೌಡರ ಕೊಡುಗೆ ಅಪಾರ. ಯಾವುದೇ ಪಕ್ಷಗಳಿಂದ ಅಂತಹ ಸಾಧನೆ ಮಾಡಲು ಆಗಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ಜನರಿಗೆ ಅನ್ಯಾಯ ಆಗುತ್ತಿದೆ. ಜನರಿಗೆ ಇದನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ. ಹೀಗಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.